newsics.com
ಭೋಪಾಲ್ (ಮಧ್ಯಪ್ರದೇಶ): ಏನೂ ಸಮಸ್ಯೆ ಇಲ್ಲ ಎಂದು ಕೇಂದ್ರ ಸರ್ಕಾರ ಎಷ್ಟೇ ಸಮಜಾಯಿಸಿ ನೀಡಿದರೂ, ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶದಲ್ಲಿ ಇಂಧನ ಕೊರತೆ ಉಂಟಾಗಿರುವುದಂತೂ ಸತ್ಯ.
ಪೆಟ್ರೋಲ್ ಪಂಪ್ಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಕೆಲವೆಡೆ ಸಿಗದ ಕಾರಣ ವಾಹನ ಬಳಕೆಯನ್ನು ನಿಲ್ಲಿಸುವಂತಾಗಿದೆ. ಹೀಗೆ, ಪೆಟ್ರೋಲ್ ಲಭ್ಯವಿಲ್ಲದ ಕಾರಣ ಬ್ಯಾಂಕ್ ಉದ್ಯೋಗಿಯೊಬ್ಬ ಕುದುರೆ ಏರಿ ಕೆಲಸಕ್ಕೆ ಹಾಜರಾಗಿದ್ದಾನೆ.
ಖಾಸಗಿ ಬ್ಯಾಂಕಿನ ಕಲೆಕ್ಷನ್ ಏಜೆಂಟ್ ಗೋಪಾಲ್ ಠಾಕೂರ್ ಎಂಬುವರು ಬೈಕ್ ಬಿಟ್ಟು ತಮ್ಮಲ್ಲಿದ್ದ ಕುದುರೆಯನ್ನು ಏರಿ ಆಫೀಸ್ಗೆ ಬಂದಿದ್ದಾರೆ. ಟಿಪ್ಟಾಪ್ ಆಗಿ ರೆಡಿಯಾಗಿದ್ದ ಗೋಪಾಲ್ ಅವರು ಕುದುರೆ ಮೇಲೆ ಸವಾರಿ ಮಾಡಿಕೊಂಡು ಹೋಗುತ್ತಿರುವುದನ್ನು ಜನರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ದೇವಾಸ್ ಜಿಲ್ಲೆಯ ರಾಧಾಗಂಜ್ ನಿವಾಸಿಯಾಗಿರುವ ಠಾಕೂರ್ ಅವರು ಜವಾಹರ್ ನಗರ ಶಾಖೆಯ ತಮ್ಮ ಕಚೇರಿಗೆ ಬೈಕ್ನಲ್ಲಿ ಬರುತ್ತಾರೆ. ಪೆಟ್ರೋಲ್ ಹಾಸಿಕೊಳ್ಳಲು ಉದ್ದನೆಯ ಸಾಲಿನಲ್ಲಿ ನಿಲ್ಲಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಆಫೀಸ್ಗೆ ಹೋಗಲು ಸಾಧ್ಯವಿಲ್ಲ ಎಂದರಿತ ಅವರು, ಖರ್ಚು ಮತ್ತು ಟ್ರಾಫಿಕ್ ಸಮಸ್ಯೆ ಇಲ್ಲದ ಕುದುರೆ ಸವಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ತಮ್ಮ ಮನೆಯಿಂದ ಮೂರು ಕಿಲೋ ಮೀಟರ್ ದೂರ ಕುದುರೆಯಲ್ಲಿ ಬಂದಿದ್ದಾರೆ. ದಾರಿ ನಡುವೆ ಇದನ್ನು ಕಂಡ ಜನರು ಅಚ್ಚರಿಗೊಂಡಿದ್ದಾರೆ. ಇನ್ನು ಕೆಲವರು ವಿಡಿಯೋ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಆಫೀಸ್ ತಲುಪಿದ ಬಳಿಕ ಸಹೋದ್ಯೋಗಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿ ನಗೆ ಬೀರಿದ್ದಾರೆ.
ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಿದೆ:
ಆಫೀಸಿಗೆ ಕುದುರೆ ಏರಿ ಬಂದ ಬಗ್ಗೆ ಗೋಪಾಲ್ ಠಾಕೂರ್ ಮಾತನಾಡಿ, “ಪೆಟ್ರೋಲ್ ಪಂಪ್ಗಳು ಜನರಿಂದ ತುಂಬಿವೆ. ಉದ್ದನೆಯ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಆಫೀಸಿಗೆ ಹೋಗಲು ಸಾಧ್ಯವಿಲ್ಲ ಎಂದರಿತು, ಕುದುರೆ ಏರಿ ಬಂದೆ. ಸಂಚಾರದಟ್ಟಣೆ, ಇಂಧನ ಖರ್ಚು ಮತ್ತು ಆಫೀಸಿಗೆ ಗೈರಾಗುವುದನ್ನು ತಪ್ಪಿಸಿದೆ” ಎಂದರು.
ಇರಾನ್, ಅಮೆರಿಕ ಮತ್ತು ಇಸ್ರೇಲ್ ಯುದ್ಧದ ಪರಿಣಾಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂಧನ ಕೊರತೆಯ ಬಗ್ಗೆ ವ್ಯಾಪಕ ವದಂತಿ ಹರಡಿ ಜನರು ಪೆಟ್ರೋಲ್ ಬಂಕ್ಗಳ ಮುಂದೆ ಜಮಾಯಿಸುವಂತೆ ಮಾಡಿದೆ.
ಬಂಕ್ಗಳ ಮುಂದೆ ರಾತ್ರಿಪೂರ್ತಿ ಜನರು ಸರತಿ ಸಾಲಿನಲ್ಲಿ ನಿಂತು ಸಿಕ್ಕ ಸಿಕ್ಕ ವಸ್ತುಗಳಲ್ಲಿ ಇಂಧನ ತುಂಬಿಸಿಕೊಂಡು ಹೋಗಿದ್ದಾರೆ. ಕೆಲವೆಡೆ ದೊಡ್ಡ ಸಾಲು ನಿಯಂತ್ರಿಸಲು ಪೊಲೀಸರು ಹರಸಾಹಪಟ್ಟಿದ್ದಾರೆ. ಇಂಧನ ಕೊರತೆ ಉಂಟಾಗಿಲ್ಲ, ದಾಸ್ತಾನು ಸಾಕಷ್ಟಿದೆ. ಭೀತಿಗೆ ಒಳಗಾಗಬೇಡಿ ಎಂದು ಸರ್ಕಾರ ಮತ್ತು ತೈಲ ಕಂಪನಿಗಳು ಹೇಳುತ್ತಿದ್ದರೂ ಜನರು ಮಾತ್ರ ಬಂಕ್ಗಳತ್ತ ದೌಡಾಯಿಸಿ ಬರುತ್ತಿದ್ದಾರೆ.
ಅನಿಲ ಅಭಾವ: ಹೆಚ್ಚುವರಿ ಹಣ ವಸೂಲಿ ಮಾಡದಂತೆ ಹೋಟೆಲ್‌ಗಳಿಗೆ ಕೇಂದ್ರ ಸರ್ಕಾರ ಸೂಚನೆ