newsics.com
ಭಾರತದ ಮಾಜಿ ಟೆನಿಸ್ ಅಟಗಾರ್ತಿ ಸಾನಿಯಾ ಮಿರ್ಜಾ ಭಾರತಕ್ಕೆ ವಾಪಸಾಗಿದ್ದಾರೆ. ದುಬೈನಲ್ಲಿ ವಾಸ ಮಾಡುತ್ತಿದ್ದ ಅವರು ಅಲ್ಲಿನ ಉದ್ವಿಗ್ನ ಹಾಗೂ ಅನಿಶ್ಚಿತ ವಾತಾವರಣದ ಬೆನ್ನಲ್ಲಿಯೇ ಭಾರತಕ್ಕೆ ವಾಪಾಸಗುವ ನಿರ್ಧಾರ ಮಾಡಿದ್ದಾರೆ. ಮಾಜಿ ಟೆನಿಸ್ ತಾರೆ ಈದ್‌ಗೆ ಮುಂಚಿತವಾಗಿಯೇ ಹೈದರಾಬಾದ್‌ನಲ್ಲಿರುವ ತಮ್ಮ ಮನೆಗೆ ವಾಪಸಾಗಿದ್ದು, ದುಬೈ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೆಚ್ಚಾಗುತ್ತಿರುವ ನಡುವೆ ತಮ್ಮ ಮಗನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳಿಂದಾಗಿ ದುಬೈನಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ.
“ನಮ್ಮ ಮನೆಯ ಮೇಲೆ ನಾವು ಫೈಟರ್ ಜೆಟ್‌ಗಳ ಹಾರಾಟದ ಶಬ್ದ ಕೇಳಿದ್ದೆವು. ಹಾಗೂ ಇಂಟರ್‌ಸೆಪ್ಟರ್‌ಗಳನ್ನೂ ಕಂಡಿದ್ದೆವು. ನಾವು ವಾಸಿಸುವ ಸ್ಥಳದಿಂದ ಸುಮಾರು 400-500 ಮೀಟರ್ ದೂರದಲ್ಲಿ ಅವಶೇಷಗಳು ಬಿದ್ದಿದ್ದವು, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ದುಬೈ ನನ್ನ ಎರಡನೇ ಮನೆ. ಕೆಲವು ಘಟನೆಗಳು ನಡೆದವು, ಮತ್ತು ಆ ಸಮಯದಲ್ಲಿ, ಭಾರತಕ್ಕೆ ಹಿಂತಿರುಗುವುದು ಉತ್ತಮ ಎಂದು ನಾನು ಭಾವಿಸಿದೆ. ನಮಗೆ ಅಸುರಕ್ಷಿತವೆನಿಸಲಿಲ್ಲ, ಆದರೆ ಅದು ಅನಿಶ್ಚಿತವೆನಿಸಿತು’ ಎಂದು ಹೇಳಿದ್ದಾರೆ.
ಮುಂದಿನ ವಾರ ಶಾಲೆ ಪ್ರಾರಂಭವಾಗಬೇಕಿತ್ತು, ಆದರೆ ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತೇವೆ. ನಾನು ಹೈದರಾಬಾದ್‌ಗೆ ಬಂದಿದ್ದೇನೆ. ಇಲ್ಲಿ ನನ್ನ ಕುಟುಂಬದ ಮನೆ ಕೂಡ ಇರುವುದು ನನಗೆ ಖುಷಿ ನೀಡಿದೆ’ ಎಂದು ಹೇಳಿದ್ದಾರೆ.
ಈದ್ ಸಂಭ್ರಮಕ್ಕಾಗಿ ಆಗಮಿಸಿದ ಸಾನಿಯಾ
ಹೈದರಾಬಾದ್‌ಗೆ ವಾಪಸಾಗಿರುವ ಸಾನಿಯಾ ಮಿರ್ಜಾ, ಪವಿತ್ರ ರಂಜಾನ್ ತಿಂಗಳಲ್ಲಿ ಕುಟುಂಬದೊಂದಿಗೆ ಸಂಭ್ರಮ ಕಳೆಯಲು ಬಯಸಿದ್ದಾರೆ. ತವರಿನಲ್ಲಿ ಈದ್ ಹಬ್ಬವನ್ನು ಆಚರಿಸುವುದು ತಮ್ಮ ಪಾಲಿಗೆ ಬಹಳ ಸ್ಪೆಷಲ್ ಎಂದು ಅವರು ಹೇಳಿದ್ದಾರೆ.