https://youtube.com/shorts/fD6pvkz7g8c?si=uKQ1N3BMJTvK6QIw
newsics.com
ಮುಂಬೈ: ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕರಾಳ ನೆರಳು ಮುಂಬೈನ ದಂತ ವೈದ್ಯೆಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಮರುಕಳಿಸಿದೆ. ಮುಂಬೈ ಮೂಲದ 25 ವರ್ಷದ ದಂತ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಬರೆದಿಟ್ಟಿರುವ ಡೆತ್ನೋಟ್ನಲ್ಲಿ ತನ್ನ ಗೆಳೆಯರು ನೀಡಿದ್ದ ಎಚ್ಚರಿಕೆಯ ಮಾತುಗಳನ್ನು ನೋವಿನಿಂದ ಸ್ಮರಿಸಿದ್ದಾರೆ.
ಮೃತ ವೈದ್ಯೆ ತನ್ನ ಪ್ರಿಯಕರನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಈ ಸಂಬಂಧದ ಬಗ್ಗೆ ಆಕೆಯ ಸ್ನೇಹಿತರು ಆತಂಕ ವ್ಯಕ್ತಪಡಿಸಿದ್ದರು. ಜಾಗ್ರತೆಯಾಗಿರು, ಇಲ್ಲದಿದ್ದರೆ ಶ್ರದ್ಧಾ ವಾಕರ್ ತರಹ ನಿನ್ನ ದೇಹದ ತುಂಡುಗಳೂ ಫ್ರಿಡ್ಜ್ನಲ್ಲಿ ಸಿಗಬಹುದು ಎಂದು ಗೆಳೆಯರು ಈ ಹಿಂದೆ ಎಚ್ಚರಿಸಿದ್ದರು.
ಪ್ರಿಯಕರನಿಂದ ಎದುರಿಸುತ್ತಿದ್ದ ನಿರಂತರ ವಂಚನೆ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತು ವೈದ್ಯೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಡೆತ್ನೋಟ್ನಲ್ಲಿ, ನನ್ನ ಗೆಳೆಯರು ಹೇಳಿದ್ದು ನಿಜವಾಯಿತು, ನಾನು ತಪ್ಪು ಸಂಬಂಧವನ್ನು ಆರಿಸಿಕೊಂಡೆ ಎಂದು ಬರೆದಿದ್ದಾರೆ.
ಶ್ರದ್ಧಾ ವಾಕರ್ ಪ್ರಕರಣದ ಉಲ್ಲೇಖ: 2022ರಲ್ಲಿ ದೆಹಲಿಯಲ್ಲಿ ಅಫ್ತಾಬ್ ಪೂನಾವಾಲ ಎಂಬಾತ ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಕರ್ ಎಂಬಾಕೆಯನ್ನು ಕೊಂದು 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್ನಲ್ಲಿ ಇಟ್ಟಿದ್ದ ಘಟನೆಯನ್ನು ಈ ಡೆತ್ನೋಟ್ ನೆನಪಿಸಿದೆ.
ಮೃತ ವೈದ್ಯೆಯ ತಂದೆ ನೀಡಿದ ದೂರಿನ ಮೇರೆಗೆ ಮುಂಬೈ ಪೊಲೀಸರು ಆಕೆಯ ಪ್ರಿಯಕರನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.