https://youtube.com/shorts/fD6pvkz7g8c?si=uKQ1N3BMJTvK6QIw
newsics.com
ಬೆಂಗಳೂರು : ಮಧ್ಯಪ್ರಾಚ್ಯ ಯುದ್ಧದಿಂದಾಗಿ ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಗ್ಯಾಸ್ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದೆ. ಹೀಗಾಗಿ ಬುಧವಾರದಿಂದಲೇ ಬೆಂಗಳೂರಿನಲ್ಲಿ ಶೇ.30ರಷ್ಟು ಸೇರಿದಂತೆ ರಾಜ್ಯವ್ಯಾಪಿ ಹೋಟೆಲ್‌ಗಳು ಬಂದ್ ಆಗುವ ಆತಂಕ ಎದುರಾಗಿದೆ. ಹೋಟೆಲ್‌ಗಳು ಮಾತ್ರವಲ್ಲದೇ ವಾಣಿಜ್ಯ ಬಳಕೆ ಸಿಲಿಂಡರ್ ಅವಲಂಬಿಸಿರುವ ಕಲ್ಯಾಣ ಮಂಟಪಗಳು, ಪಿಜಿಗಳು ಹಾಗೂ ಕ್ಯಾಟರಿಂಗ್‌ನವರೂ ಸಮಸ್ಯೆಗೆ ಸಿಲುಕಿದ್ದಾರೆ.
ಸೋಮವಾರವೇ ಸಮರ್ಪಕವಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ಸರಬರಾಜು ಮಾಡಿಲ್ಲ ಎಂದು ಬೆಂಗಳೂರು ಹೋಟೆಲುಗಳ ಸಂಘವು ಆಕ್ರೋಶ ವ್ಯಕ್ತಪಡಿಸಿತ್ತು. ಆದರೂ ಮಂಗಳವಾರವೂ ಸಿಲಿಂಡರ್ ಸರಬರಾಜು ಆಗದೇ ಇರುವುದರಿಂದ ಬುಧವಾರದಿಂದ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಹೋಟೆಲ್ ಉದ್ಯಮ ಆತಂಕ ವ್ಯಕ್ತಪಡಿಸಿದೆ.
ಮತ್ತೊಂದೆಡೆ, ಕಲ್ಯಾಣ ಮಂಟಪ, ಕ್ಯಾಟರಿಂಗ್‌ನವರು, ಪಿಜಿಗಳನ್ನು ನಡೆಸುವವರೂ ವಾಣಿಜ್ಯ ಅನಿಲ ಸಿಲಿಂಡರ್ ಪೂರೈಕೆಯಾಗದೆ ಸಂಕಷ್ಟ ಅನುಭವಿಸಿದ್ದಾರೆ. ಕೆಲ ಹೋಟೆಲ್‌ನವರು ಸಿಲಿಂಡರ್ ಖಾಲಿಯಿಂದಾಗಿ ಸೌದೆ ಒಲೆ ಬಳಸಿದ್ದು ಕಂಡು ಬಂತು. ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟವಾಗುತ್ತಿದ್ದು, ತಿಂಡಿ ತಿನಿಸುಗಳ ಬೆಲೆಯೂ ಮುಂದಿನ ದಿನಗಳಲ್ಲಿ ಅಧಿಕವಾಗುವ ಸಂಭವವಿದೆ.