newsics.com
ಮೈಸೂರು; ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕೊಟ್ಟರೆ, ಮುಂದಿನ ಎರಡು ಬಜೆಟ್‌ಗಳನ್ನು ಮಂಡಿಸುತ್ತೇನೆ. ಇಲ್ಲವೇ ಅಧಿಕಾರ ಬಿಡಿ ಎಂದರೆ ಬಿಟ್ಟುಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಪುನರ್‌ಸ್ಪಷ್ಟಪಡಿಸಿದರು. ಈಗಾಗಲೇ 17 ಬಜೆಟ್‌ಗಳನ್ನು ಮಂಡಿಸಿದ್ದೇನೆ. ರಾಜ್ಯದಲ್ಲಿ ಅತೀ ಹೆಚ್ಚು ಬಜೆಟ್ ಮಂಡಿಸಿರುವುದು ನಾನೇ. ಇನ್ನೆರಡು ಬಜೆಟ್ ಮಂಡಿಸಿದರೆ, 19 ಬಜೆಟ್‌ಗಳಾಗಿದ್ದು, ದಾಖಲೆ ನಿರ್ಮಾಣವಾಗುತ್ತದೆ. ಆದರೆ ತಮಗೆ ದಾಖಲೆ ಮುರಿಯುವುದು ಮುಖ್ಯ ಅಲ್ಲ ಎಂದರು.
ರಾಜ್ಯದ ಜನ, ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕೊಟ್ಟರೆ ಇನ್ನೆರಡು ಬಜೆಟ್‌ಗಳನ್ನು ಮಂಡಿಸುತ್ತೇನೆ. ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ. ಅವರು ಅಧಿಕಾರದಲ್ಲಿ ಮುಂದುವರಿಯಿರಿ ಎಂದರೆ ಮುಂದುವರಿಯುತ್ತೇನೆ. ಬಿಡಿ ಎಂದರೆ ಬಿಡುತ್ತೇನೆ. ವಾಸ್ತವ ಬಿಟ್ಟು ಮಾತನಾಡುವುದಿಲ್ಲ ಎಂದು ಹೇಳಿದರು.
ಬಜೆಟ್ ಹಾಗೂ ಯುಗಾದಿ ನಂತರ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಹುದ್ದೆ ತೊರೆಯುತ್ತಾರೆ ಎಂದು ಚರ್ಚೆಗಳು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಆದರೆ ನಾನು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ. ಸಿದ್ದರಾಮಯ್ಯ ಅವರು ಮುಂದುವರೆಯಬೇಕೆಂದು ಮೈಸೂರು ಜನರಿಗಷ್ಟೇ ಅಲ್ಲ, ರಾಜ್ಯದ ಜನರಿಗೂ ಆಸೆ ಇದೆ ಎಂದರು.