newsics.com
ರಾಜ್ಯದ 2026-27ನೇ ಸಾಲಿನ ಬಜೆಟ್ ಮಂಡನೆ ವಿಧಾನಸಭೆಯಲ್ಲಿ ಭರದಿಂದ ಸಾಗಿದ್ದು, ದಾಖಲೆಯ 17ನೇ ಆಯವ್ಯಯ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲು ನೋವಿನ ಕಾರಣ ಇದೀಗ ಕುಳಿತುಕೊಂಡೇ ಬಜೆಟ್ ಭಾಷಣ ಓದುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ ಸರಿಯಾಗಿ 10.25ಕ್ಕೆ ವಿಧಾನಸಭೆಯಲ್ಲಿ ತಮ್ಮ ಸ್ಥಾನದಲ್ಲಿ ಎದ್ದು ನಿಂತುಕೊಂಡು ಆಯವ್ಯಯ ಪತ್ರವನ್ನು ಓದಲು ಆರಂಭಿಸಿದ ಸಿಎಂ, ಆರಂಭಿಕ ಕೆಲಹೊತ್ತು ನಿಂತುಕೊಂಡೇ ಬಜೆಟ್ನ ಮುಖ್ಯಾಂಶಗಳನ್ನು ವಿವರಿಸಿದರು. ಈ ಬಾರಿಯ ಬಜೆಟ್ ಬೃಹತ್ ಗಾತ್ರದ್ದಾಗಿದ್ದು, ಭಾಷಣದ ಪ್ರತಿ ಕೂಡ ಬಹಳ ಸುದೀರ್ಘವಾಗಿದೆ.
ಸತತವಾಗಿ ನಿಂತುಕೊಂಡು ಓದುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ವಯೋಸಹಜವಾಗಿ ಸ್ವಲ್ಪ ಕಾಲು ನೋವು ಕಾಣಿಸಿಕೊಂಡಿದೆ. ಅಲ್ಲದೇ ಬಜೆಟ್ ಮಂಡನೆಗೆ ಬರುವಾಗ ಊರುಗೋಲು ಹಿಡಿದು ಬಂದಿದ್ದರು.
ಬಜೆಟ್ ವಾಚನದ ನಡುವೆಯೇ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಬಳಿ ಮನವಿ ಮಾಡಿದ ಮುಖ್ಯಮಂತ್ರಿಗಳು, ಇನ್ನೂ ಕೆಲವೊಂದಷ್ಟು ಹೊತ್ತು ನಿಂತುಕೊಂಡೇ ಓದುತ್ತೇನೆ. ಆ ಬಳಿಕ ಕಾಲು ನೋವಿನ ಕಾರಣ ದಯವಿಟ್ಟು ಕುಳಿತುಕೊಂಡು ಓದಲು ಅವಕಾಶ ಮಾಡಿಕೊಡಬೇಕು ಎಂದು ಅನುಮತಿ ಕೋರಿದರು.
ಮುಖ್ಯಮಂತ್ರಿಗಳ ಆರೋಗ್ಯದ ದೃಷ್ಟಿಯಿಂದ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಸ್ಪೀಕರ್ ಯು.ಟಿ. ಖಾದರ್ ಅವರು, ‘ಕುಳಿತುಕೊಂಡೇ ಬಜೆಟ್ ಓದಿ’ ಎಂದು ಸಮ್ಮತಿ ಸೂಚಿಸಿದರು.
ಸ್ಪೀಕರ್ ಅನುಮತಿ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಸನದಲ್ಲಿ ಆರಾಮವಾಗಿ ಕುಳಿತುಕೊಂಡೇ ಸುದೀರ್ಘವಾದ ಬಜೆಟ್ ಪ್ರತಿಯನ್ನು ಓದುವುದನ್ನು ಮುಂದುವರಿಸಿದ್ದು, ಕೃಷಿ, ನೀರಾವರಿ, ಮಹಿಳಾ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಿಗೆ ಭರಪೂರ ಕೊಡುಗೆಗಳನ್ನು ಘೋಷಣೆ ಮಾಡುತ್ತಿದ್ದಾರೆ.