https://youtube.com/shorts/4DdUNKT1F8Q?si=WqCYQodDieS5bX6t
Subscribe ನ್ಯೂಸಿಕ್ಸ್ ಕನ್ನಡ
newsics.com
ಮಡಿಕೇರಿ: ಶಾಲೆ ಬಿಟ್ಟು ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯೊಬ್ಭಳು ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾದ ಮನಕಲಕುವ ಘಟನೆ ಇಲ್ಲಿಗೆ ಸಮೀಪದ ಬೆಟ್ಟತ್ತೂರು ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಬೆಟ್ಟತ್ತೂರು ಗ್ರಾಮದ ಗಿರೀಶ್ ಎಂಬವರ ಪುತ್ರಿ, ಮಡಿಕೇರಿಯ ಸಂತ ಜೋಸೆಫರ ಶಾಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪೂಜಾ (16) ಸಾವಿಗೀಡಾದ ಬಾಲಕಿ.
ಶನಿವಾರ ಸಂಜೆ 5:30ರ ವೇಳೆಗೆ ಬಸ್’ನಿಂದಿಳಿದು ಬೆಟ್ಟತ್ತೂರಿನ ತನ್ನ ಮನೆ ನಡೆದುಕೊಂಡು ಹೋಗುವ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡ ಪೂಜಾ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಘಟನೆಯ ಮಾಹಿತಿ ತಿಳಿದು ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.ಮೃತದೇಹವನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಟ್ಟತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗಿರುವುದರಿಂದ ಹಲವು ಬಾರಿ ದೂರು ನೀಡಿದ್ದರೂ ಸಮರ್ಪಕ ಕ್ರಮಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ. “ಗ್ರಾಮದ ಬಳಿ ಕಾಡಾನೆಗಳ ಸಂಚಾರ ನಿಯಂತ್ರಿಸಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅಮಾಯಕ ಬಾಲಕಿಯ ಜೀವ ಹೋಗಿರುವುದು ದುರದೃಷ್ಟಕರ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಫೆಬ್ರವರಿ ಎರಡನೇ ವಾರದಲ್ಲಿ ಇದೇ ಗ್ರಾಮದ ರಸ್ತೆಯಲ್ಲಿ ರೆಸಾರ್ಟ್ ಕೆಲಸ ಮುಗಿಸಿ ಬೈಕ್’ನಲ್ಲಿ ಮನೆಗೆ ತೆರಳುತ್ತಿದ್ದ ಯುವಕನೊಬ್ಬನ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.