https://youtube.com/shorts/N5x7_cDJ-pw?si=NiCZz1Vb_Is4d402
Subscribe ನ್ಯೂಸಿಕ್ಸ್ ಕನ್ನಡ
newsics.com
ಸೀನು ಯಾವಾಗ ಬರುತ್ತೆ ಎನ್ನಲು ಸಾಧ್ಯವಿಲ್ಲ. ಎಲ್ಲೆಂದರಲ್ಲಿ ಅಚಾನಕ್ಕಾಗಿ ಬಂದು ಬಿಡುತ್ತದೆ. ಕೆಲವೊಂದು ಈ ಅಚಾನಕ್ಕಾಗಿ ಬಂದ ಸೀನು ನಿಂದಾಗಿ ಮರ್ಯಾದೆ ಹೋಗುವ ಸಂದರ್ಭಗಳೂ ಸೃಷ್ಟಿಯಾಗುತ್ತವೆ. ಅದರಲ್ಲೂ ಸಾಂಕ್ರಾಮಿಕ ಸಮಯದಲ್ಲಿ, ಸಾರ್ವಜನಿಕವಾಗಿ ಸೀನುವುದು ಅಥವಾ ಕೆಮ್ಮುವುದು ಗಮನಾರ್ಹ ಸಮಸ್ಯೆಯಾಗಿದೆ. ಆದರೆ ಸೀನು ತಡೆಯುವುದರಿಂದ ಏನಾಗುತ್ತೆ? ಎಂದು ನಾವು ಅಂದುಕೊಳ್ಳಬಹುದು, ಆದರೆ ಬ್ರಿಟಿಷ್ ವ್ಯಕ್ತಿಯೊಬ್ಬನಿಗೆ ಎದುರಾದ ಈ ಅನುಭವ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ.
ಚಾಲನೆ ಮಾಡುವಾಗ ಸೀನನ್ನು ತಡೆದಿದ್ದರಿಂದ ಆ ವ್ಯಕ್ತಿಯ ಗಂಟಲಿನಲ್ಲಿ ರಂಧ್ರ ಉಂಟಾಗಿ, ಗಾಳಿಯು ಶ್ವಾಸಕೋಶದೊಳಗೆ ನುಗ್ಗಿದೆ. ಇದು ವೈದ್ಯಕೀಯ ಲೋಕದಲ್ಲೇ ಅತ್ಯಂತ ಅಪರೂಪದ ಪ್ರಕರಣವಾಗಿದ್ದು, BMJ Case Reports ಜರ್ನಲ್ನಲ್ಲಿ ಪ್ರಕಟವಾಗಿದೆ.
2023ರಲ್ಲಿ ಬ್ರಿಟನ್ನ 30 ವರ್ಷದ ಆರೋಗ್ಯವಂತ ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ, ಅಲರ್ಜಿಯಿಂದಾಗಿ ಸೀನು ಬಂದಿದೆ. ಸೀನನ್ನು ತಡೆಯಲು ಆತ ತನ್ನ ಮೂಗನ್ನು ಗಟ್ಟಿಯಾಗಿ ಹಿಡಿದು ಬಾಯಿಯನ್ನು ಮುಚ್ಚಿಕೊಂಡಿದ್ದಾನೆ. ಸೀನು ಏನೋ ನಿಂತಿತು, ಆದರೆ ತಕ್ಷಣವೇ ಆತನ ಗಂಟಲಿನಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿದೆ. ಗಂಟಲಿನ ಒಳಗೆ ಏನೋ ಒಡೆದಂತ ಅನುಭವವಾಗಿ, ಕುತ್ತಿಗೆ ಊದಿಕೊಳ್ಳಲಾರಂಭಿಸಿತು ಮತ್ತು ಉಸಿರಾಟ ಕಷ್ಟವಾಯಿತು.
ಆಸ್ಪತ್ರೆಗೆ ದಾಖಲಾದಾಗ ನಡೆಸಿದ ಸಿಟಿ ಸ್ಕ್ಯಾನ್ನಲ್ಲಿ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಆತನ ಟ್ರಾಕಿಯಾ (Trachea – ಉಸಿರಾಟದ ನಳಿಕೆ) ದಲ್ಲಿ 2×2 ಮಿಲಿಮೀಟರ್ ಗಾತ್ರದ ರಂಧ್ರವಾಗಿತ್ತು. ಇದರಿಂದಾಗಿ ಗಾಳಿಯು ಎದೆ ಮತ್ತು ಶ್ವಾಸಕೋಶದ ಮಧ್ಯದ ಭಾಗಕ್ಕೆ ನುಗ್ಗಿತ್ತು. ಇದು ಪ್ರಾಣಕ್ಕೆ ಕುತ್ತು ತರುವಂತಹ ಸ್ಥಿತಿಯಾಗಿತ್ತು.
ಈ ವರದಿಯ ಪ್ರಮುಖ ಲೇಖಕರಾದ ಡಾ. ರಾಸಾದ್ಸ್ ಮಿಸಿರೊವ್ಸ್ ಅವರ ಪ್ರಕಾರ, ಇದು ನಮಗೆ ಆಶ್ಚರ್ಯ ತಂದ ಪ್ರಕರಣ. ಇಂತಹ ಕೇಸ್ ನಾವು ಹಿಂದೆಂದೂ ನೋಡಿರಲಿಲ್ಲ. ಸೀನನ್ನು ಬಲವಂತವಾಗಿ ತಡೆದಾಗ ಉಸಿರಾಟದ ನಾಳದ ಮೇಲಿನ ಒತ್ತಡವು ಸಾಮಾನ್ಯಕ್ಕಿಂತ 5 ರಿಂದ 24 ಪಟ್ಟು ಹೆಚ್ಚಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.
ಅದೃಷ್ಟವಶಾತ್, 48 ಗಂಟೆಗಳ ಕಾಲ ವೈದ್ಯರ ನಿಗಾದಲ್ಲಿದ್ದ ವ್ಯಕ್ತಿ, ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ 5 ವಾರಗಳ ನಂತರ ಗುಣಮುಖನಾದನು.