Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಹಿಳೆ ಕಳೆದ ಎರಡು ವರ್ಷಗಳಿಂದ ಪ್ರತಿದಿನವೂ ಆಫೀಸಿಗೆ 40 ನಿಮಿಷ ಮುಂಚಿತವಾಗಿ ಬರುತ್ತಿದ್ದ ಕಾರಣಕ್ಕೆ ಕೆಲಸದಿಂದ ತೆಗೆದಿದ್ದು,.ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ರೆ, ಆ ನ್ಯಾಯಾಲಯ ಕೂಡ ಮಹಿಳೆಗೇ ಶಾಕ್ ನೀಡಿದೆ.
ಸ್ಪೇನ್ನಲ್ಲಿ 22 ವರ್ಷದ ಮಹಿಳಾ ಉದ್ಯೋಗಿ ಕಳೆದ ಎರಡು ವರ್ಷಗಳಿಂದ ಕಚೇರಿಗೆ ಮುಂಚಿತವಾಗಿಯೇ ಬರುತ್ತಿದ್ದಳು. ಈಕೆಯ ಆಫೀಸ್ ಶುರುವಾಗುವುದು ಬೆಳಗ್ಗೆ 7.30ಕ್ಕೆ. ಆದರೆ ಈ ಮಹಿಳೆ ಕಚೇರಿ ತಲುಪೋದು ಬೆಳಗ್ಗೆ 6.45 ಅಥವಾ 7ಗಂಟೆಗೆ ಆಗಿತ್ತು. ಇದೇ ಕಾರಣ ಇಟ್ಟುಕೊಂಡು ಆಕೆಯನ್ನ ಕೆಲಸದಿಂದ ತೆಗೆದಿರುವ ಕಂಪನಿ ಆಕೆ ಪ್ರತಿದಿನ ಬೇಗನೇ ಆಫೀಸಿಗೆ ಬಂದರೂ, ಆ ಸಮಯದಲ್ಲಿ ಮಾಡಲು ಏನೂ ಕೆಲಸ ಇರಲಿಲ್ಲ ಎಂದು ಹೇಳಿಕೊಂಡಿದೆ.
ಕಂಪನಿಗೆ ಅಷ್ಟು ಬೇಗ ಬರೋದು ಬೇಡ ಎಂದು ಮಹಿಳೆಗೆ ಆಕೆಯ ಬಾಸ್ ಪದೇಪದೆ ಹೇಳಿದ್ದಾರೆ. ಆದರೆ ಆಕೆ ಕೇಳಲಿಲ್ಲ. ಇದು ಸರಿಯಾದ ವರ್ತನೆ ಅಲ್ಲ, ಕಂಪನಿ ನಿಯಮಗಳನ್ನ ಮುರಿದಂತೆ ಎಂದು ಹೇಳಿರುವ ಬಾಸ್ ಕೊನೆಗೆ ಅವಳನ್ನ ಕೆಲಸದಿಂದ ತೆಗೆದುಹಾಕಿದ್ದಾರೆ.
ತನ್ನನ್ನ ಕೆಲಸದಿಂದ ತೆಗೆದ ಕಂಪನಿ ವಿರುದ್ಧ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಳು. ನನ್ನನ್ನ ಕೆಲಸದಿಂದ ತೆಗೆದಿದ್ದು ಅನ್ಯಾಯ ಎಂದು ವಾದಿಸಿದ್ದಳು. ಸ್ಪೇನ್ನ ಅಲಿಕಾಂಟೆಯ ಸಾಮಾಜಿಕ ನ್ಯಾಯಾಲಯವು ಕಂಪನಿಯ ಪರವಾಗಿಯೇ ನಿಂತಿದೆ. ಹಲವು ಮೌಖಿಕ ಮತ್ತು ಲಿಖಿತ ಎಚ್ಚರಿಕೆಗಳ ಹೊರತಾಗಿಯೂ ಬೇಗನೆ ಬರುವುದನ್ನು ಮುಂದುವರಿಸಿದ್ದು ಯಾಕೆ ಎಂದು ನ್ಯಾಯಾಧೀಶರು ಮಹಿಳೆ ಬಳಿ ಕೇಳಿದ್ದಾರೆ.
ಇನ್ನು ಈ ಉದ್ಯೋಗಿ ಕಚೇರಿಗೆ ಬೇಗನೇ ಬರುವುದಲ್ಲದೆ, ಸುಮಾರು 19 ಸಲ, ಕಂಪನಿಯ ಕ್ಯಾಂಪಸ್ ತಲುಪುವ ಮೊದಲೇ ಆಪ್ ಮೂಲಕ ಲಾಗಿನ್ ಆಗಲು ಯತ್ನಿಸಿದ ಘಟನೆಗಳೂ ನಡೆದಿವೆ. ಯುವತಿಯು ನಂಬಿಕೆ, ವಿಶ್ವಾಸ ದ್ರೋಹ ಮಾಡಿದ್ದಾಳೆ ಎಂದೂ ಕಂಪನಿ ಮುಖ್ಯಸ್ಥ ಆರೋಪ ಮಾಡಿದ್ದಾರೆ. ಇನ್ನು ನ್ಯಾಯಾಲಯವು ಯುವತಿಯನ್ನ ವಜಾಗೊಳಿಸಿದ್ದರಲ್ಲಿ ತಪ್ಪಿಲ್ಲ ಎಂದು ಹೇಳಿದೆ. ಯುವತಿ ಸಮಯ ಪಾಲನೆ ಮಾಡಿದ್ದು ತಪ್ಪಲ್ಲ. ಆದರೆ ಕೆಲಸದ ನಿಯಮಗಳನ್ನ, ಬಾಸ್ ನೀಡಿದ ಎಚ್ಚರಿಕೆಗಳನ್ನ ಮೀರಿದ್ದು ತಪ್ಪು ಎಂದು ಕೋರ್ಟ್ ಹೇಳಿದೆ.