Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನೆರೆಯ ಆಂಧ್ರಪ್ರದೇಶದಲ್ಲಿ ‘ಸ್ಕ್ರಬ್ ಟೈಫಸ್’ ಎಂಬ ಬ್ಯಾಕ್ಟೀರಿಯಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಆಂಧ್ರಪ್ರದೇಶದ ಜತೆ ಗಡಿ ಹಂಚಿಕೊಂಡಿರುವ ಕರ್ನಾಟಕದಲ್ಲೂ ಆತಂಕ ಸೃಷ್ಟಿಯಾಗಿದೆ. ಮುನ್ನೆಚ್ಚರಿಕೆ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ. ವಿಜಯನಗರಂ ಜಿಲ್ಲೆಯಲ್ಲಿ ಈ ಸೋಂಕಿನಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬ ವರದಿಗಳು ಬಂದಿದ್ದು, ರಾಜ್ಯಾದ್ಯಂತ ಇಲ್ಲಿಯವರೆಗೆ 1,317 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ವಿಜಯನಗರಂ ಜಿಲ್ಲೆಯ ಚೀಪುರುಪಲ್ಲಿ ಮಂಡಲದ ಮಿತ್ತಪಲ್ಲಿ ಗ್ರಾಮದ ರಾಜೇಶ್ವರಿ (36) ಎಂಬುವವರು ನವೆಂಬರ್ 30ರಂದು ಮೃತಪಟ್ಟಿದ್ದಾರೆ. ಇವರು ಕಳೆದ ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಅವರಿಗೆ ‘ಸ್ಕ್ರಬ್ ಟೈಫಸ್’ ಬ್ಯಾಕ್ಟೀರಿಯಾ ಸೋಂಕು ಇರುವುದು ಕಂಡುಬಂದಿತ್ತು. ಚಿಕಿತ್ಸೆ ಪಡೆದರೂ ಅವರ ಆರೋಗ್ಯ ಹದಗೆಟ್ಟು, ಅಂತಿಮವಾಗಿ ಸಾವನ್ನಪ್ಪಿದ್ದಾರೆ.
ಏನಿದು ಸೋಂಕು?: ಉಣ್ಣಿ ಹೋಲುವ ಸಣ್ಣ ಕೀಟದಿಂದ ಈ ಸೋಂಕು ತಗುಲುತ್ತದೆ. ಸ್ಕ್ರಬ್ ಟೈಫಸ್ ರಿಕೆಟ್ಸಿಯಾ ಕುಟುಂಬಕ್ಕೆ ಸೇರಿದ ಓರಿಯೆಂಟಿಯಾ ಸುಟ್ಸುಗಮುಶಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಕೀಟ ಕಚ್ಚಿದಾಗ, ದೇಹದ ಮೇಲೆ ಕಪ್ಪು ಚುಕ್ಕೆ ಮತ್ತು ದದ್ದು ಕಾಣಿಸಿಕೊಳ್ಳುತ್ತದೆ. ಒಂದು ವಾರ ಅಥವಾ ಹತ್ತು ದಿನಗಳ ನಂತರ ಸೋಂಕು ಜ್ವರ, ಶೀತ, ತಲೆನೋವು, ಸ್ನಾಯು ನೋವು ಮತ್ತು ಜೀರ್ಣಕಾರಿ ಸಮಸ್ಯೆ ಕಂಡು ಬರುತ್ತದೆ. ಈ ಸೋಂಕಿಗೆ ಸೂಕ್ತ ಸಮಯದಲ್ಲಿ ಪತ್ತೆ ಮಾಡಿ ಚಿಕಿತ್ಸೆ ನೀಡದಿದ್ದರೆ, ತೀವ್ರವಾದ ಉಸಿರಾಟದ ತೊಂದರೆ, ಸಿಂಡ್ರೋಮ್, ಮೆದುಳು ಮತ್ತು ಬೆನ್ನುಮೂಳೆಯ ಸೋಂಕುಗಳು (ಮೆನಿಂಜೈಟಿಸ್) ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು.