Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ಈರುಳ್ಳಿ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ರೈತರು ಮತ್ತು ವ್ಯಾಪಾರಿಗಳಿಗೆ ದಿಕ್ಕೇ ತೋಚದಂತಾಗಿದೆ.
ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತು ನಿಷೇಧ ಜಾರಿಯಲ್ಲಿರುವುದರಿಂದ ದೇಶಿಯ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿರುವುದು ಬೆಲೆ ಕುಸಿತಕ್ಕೆ ಕಾರಣವೆಂದು ಘಾಜಿಪುರ ಮಂಡಿಯ ವ್ಯಾಪಾರಿಗಳು ಹೇಳಿದ್ದಾರೆ.
ಪ್ರಸ್ತುತ ನಾಸಿಕ್, ಅಲ್ವಾರ್, ಮಧ್ಯಪ್ರದೇಶ ಮತ್ತು ಬೆಂಗಳೂರು ಸೇರಿದಂತೆ ಇತರ ಸ್ಥಳಗಳಿಂದ ಬಂದ ಈರುಳ್ಳಿ ಮಾರುಕಟ್ಟೆಯಲ್ಲಿದೆ. ಇಳುವರಿಯೂ ಚೆನ್ನಾಗಿದೆ. ಈರುಳ್ಳಿ ರಫ್ತು ನಿಷೇಧದಿಂದಾಗಿ, ಘಾಜಿಪುರ ಮಂಡಿಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿಗೆ ಹೋಲ್ಸೇಲ್ ಬೆಲೆ ಕೆ.ಜಿಗೆ 2 ರೂ.ನಿಂದ 13 ರೂ.ವರೆಗೆ ಇದೆ” ಎಂದು ಘಾಜಿಪುರ ಮಂಡಿಯ ಈರುಳ್ಳಿ ವ್ಯಾಪಾರಿ ಪರಮಾನಂದ ಸೈನಿ ತಿಳಿಸಿದರು.
ಬೆಳೆಗೆ ಖರ್ಚು ಮಾಡಿದ ಹಣವೂ ರೈತರಿಗೆ ಸಿಗುತ್ತಿಲ್ಲ. ಕಡಿಮೆ ದರಕ್ಕೆ ಈರುಳ್ಳಿ ಮಾರಾಟ ಮಾಡಬೇಕಿರುವುದರಿಂದ ರೈತರಿಗೆ ಭಾರೀ ನಷ್ಟ ಉಂಟಾಗುತ್ತಿದೆ. ಅವರು ಕಮಿಷನ್ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ ಮತ್ತು ಬೆಳೆಗೆ ಹೂಡಿಕೆ ಮಾಡಿದ್ದ ಬಂಡವಾಳವನ್ನು ಸಹ ಭರಿಸಬೇಕಾಗುತ್ತದೆ. 50 ಕೆ.ಜಿ ಈರುಳ್ಳಿ ಚೀಲಕ್ಕೆ ಕೇವಲ 100 ರೂ. ರಿಂದ 120 ರೂ. ಬೆಲೆ ಇದೆ ಎಂದು ಹೇಳಿದರು.
ಮತ್ತೊಬ್ಬ ವ್ಯಾಪಾರಿ ಸುಚಾ ಸಿಂಗ್ ಮಾತನಾಡಿ, ಸರ್ಕಾರಿ ಸಂಸ್ಥೆಗಳು ಹೆಚ್ಚುವರಿ ಉತ್ಪಾದನೆಯ ಸಮಯದಲ್ಲಿ ಹಿಂದೆ ದಾಸ್ತಾನು ಮಾಡಿದ ಈರುಳ್ಳಿಯನ್ನು ಮಾರುಕಟ್ಟೆಗೆ ಪೂರೈಕೆ ಮಾಡುತ್ತಿವೆ ಎಂದು ಆರೋಪಿಸಿದರು.
ಬಾಂಗ್ಲಾದೇಶದ ಗಡಿಯನ್ನು ಒಂದು ವರ್ಷದಿಂದ ಮುಚ್ಚಲಾಗಿದ್ದು, ನಷ್ಟ ಉಂಟಾಗುತ್ತಿದೆ. ದಾಸ್ತಾನುಗಳು ಸಂಗ್ರಹವಾಗುತ್ತಿವೆ.
ಸರಕು ರಫ್ತು ಮತ್ತು ವಿದೇಶಿ ವ್ಯಾಪಾರ ತಜ್ಞ ಲೋಕೇಶ್ ಗುಪ್ತಾ ಮಾತನಾಡಿ, ಸರ್ಕಾರವು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳೆರಡಕ್ಕೂ ದಾಸ್ತಾನು ಮಿತಿಗಳನ್ನು ನಿಗದಿಪಡಿಸಬೇಕು. ಇದರಿಂದಾಗಿ ಅತಿಯಾದ ದಾಸ್ತಾನನ್ನು ತಡೆಗಟ್ಟಬಹುದು. ರೈತರನ್ನು ರಕ್ಷಿಸಲು ಭಾರತ ತನ್ನ ರಫ್ತು ಮಾರುಕಟ್ಟೆಗಳನ್ನು ವಿಸ್ತರಿಸಬೇಕು ಎಂದು ಸಲಹೆ ನೀಡಿದರು.
ಒಂದು ದೇಶದೊಂದಿಗಿನ ವ್ಯಾಪಾರ ಸ್ಥಗಿತಗೊಂಡರೆ, ನಾವು ಮತ್ತೊಂದು ದೇಶಕ್ಕೆ ಉತ್ಪನ್ನವನ್ನು ಪೂರೈಸಬಹುದು, ರೈತರು ನಷ್ಟ ಅನುಭವಿಸದಂತೆ ನೋಡಿಕೊಳ್ಳಬೇಕು. ವಿದೇಶಿ ಮಾರುಕಟ್ಟೆಗಳಲ್ಲಿ ಭಾರತದ ಉಪಸ್ಥಿತಿಯನ್ನು ವಿಸ್ತರಿಸಲು ಮತ್ತು ರೈತರಿಗೆ ಉತ್ತಮ ಬೆಲೆಗಳು ಸಿಗುವಂತೆ ಮಾಡಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಲಿಮಿಟೆಡ್ (NAFED) ವಿದೇಶಿ ಶಾಖೆಗಳನ್ನು ಸ್ಥಾಪಿಸುವ ಬಗ್ಗೆ ಯೋಚಿಸಬೇಕು. ಬಾಂಗ್ಲಾದೇಶ ಸೇರಿದಂತೆ ಗಲ್ಫ್ ರಾಷ್ಟ್ರಗಳು, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾದಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಿದೆ ಎಂದು ಹೇಳಿದರು.
ಭಾರತದ ಈರುಳ್ಳಿ ರಫ್ತಿನಲ್ಲಿ ಬಾಂಗ್ಲಾದೇಶವು ಈ ಹಿಂದೆ ಮೂರನೇ ಒಂದು ಭಾಗದಷ್ಟು ಪಾಲನ್ನು ಹೊಂದಿತ್ತು. ಸದ್ಯ ಅಲ್ಲಿಗೆ ರಫ್ತು ನಿಂತುಹೋಗಿದೆ ಮತ್ತು ಸೌದಿ ಅರೇಬಿಯಾ ಕೂಡ ಸುಮಾರು ಒಂದು ವರ್ಷದಿಂದ ಈರುಳ್ಳಿ ಖರೀದಿಯನ್ನು ಕಡಿಮೆ ಮಾಡಿದೆ.
ಭಾರತೀಯ ಈರುಳ್ಳಿ ಬೀಜಗಳ ಅಕ್ರಮ ರಫ್ತು, ಕೆಲವು ಸಾಂಪ್ರದಾಯಿಕ ಖರೀದಿದಾರ ದೇಶಗಳು ಸ್ವಾವಲಂಬಿಯಾಗಲು ಸಹಾಯ ಮಾಡಿದೆ. ಇದರಿಂದ ಭಾರತ ತನ್ನ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತಿದೆ.
ಭಾರತವು 2023 ಆಗಸ್ಟ್ ಮತ್ತು 2025ರ ಏಪ್ರಿಲ್ ನಡುವೆ ಈರುಳ್ಳಿ ರಫ್ತಿನ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಈ ಹಿಂದೆ, 2019 ಸೆಪ್ಟಂಬರ್ ಮತ್ತು 2020 ಸೆಪ್ಟೆಂಬರ್‌ನಲ್ಲಿ ಆರು ತಿಂಗಳ ಕಾಲ ರಫ್ತು ಮೇಲೆ ಸಂಪೂರ್ಣ ನಿಷೇಧ ಹೇರಲಾಗಿತ್ತು.
ಬಾಂಗ್ಲಾದೇಶ ಸರ್ಕಾರವು ತಮ್ಮ ರೈತರ ಹಿತ ಕಾಪಾಡಲು ಮತ್ತು ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಪ್ರಸ್ತುತ ಭಾರತದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಯೆಮೆನ್ ಮತ್ತು ಇರಾನ್‌ನಿಂದ ಸ್ಪರ್ಧಾತ್ಮಕ ಬೆಲೆಗೆ ಈರುಳ್ಳಿಯನ್ನು ಖರೀದಿಸುತ್ತಿದ್ದೇವೆ ಮತ್ತು ಸಾಕಷ್ಟು ಸ್ಥಳೀಯ ಉತ್ಪಾದನೆಯನ್ನು ಹೊಂದಿದ್ದೇವೆ ಎಂದು ಸೌದಿ ಅರೇಬಿಯಾ ರಫ್ತುದಾರರಿಗೆ ತಿಳಿಸಿದೆ.