Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ದೆಹಲಿ ಬಾಂಬ್ ಸ್ಫೋಟಕ್ಕೂ ನೆರೆಯ ದೇಶದ ಭಯೋತ್ಪಾದಕ ಸಂಘಟನೆಗಳಿಗೂ ಇರುವ ನಂಟು ತನಿಖೆಯ ಮೂಲಕ ಬಹಿರಂಗವಾಗಿದೆ.
ಒಂದು ಕಾಲದಲ್ಲಿ ಭಾರತದ ವಿರುದ್ಧ ಉಗ್ರದಾಳಿ ನಡೆಸಲು ಕಾರಣವಾಗಿ, ಈಗ ಭಾರತದೆಡೆಗೆ ಸ್ನೇಹ ಹಸ್ತ ಚಾಚುತ್ತಿರುವ ಅಫ್ಘಾನಿಸ್ತಾನಕ್ಕೂ ದೆಹಲಿ ಬಾಂಬ್ ಸ್ಫೋಟದ ಉಗ್ರರಿಗೂ ನಂಟು ಇದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ತನಿಖೆ ಭದ್ರತಾ ಸಂಸ್ಥೆಗಳಿಗೆ ಮತ್ತೊಂದು ಆಘಾತಕಾರಿ ವಿವರವನ್ನು ಬಹಿರಂಗಪಡಿಸಿದೆ
ದೆಹಲಿ ಪೊಲೀಸರ ವಿಶೇಷ ಶಾಖೆಯ ಗೌಪ್ಯ ವರದಿಯು ವಿಶ್ವವಿದ್ಯಾನಿಲಯದೊಂದಿಗೆ ಸಂಪರ್ಕ ಹೊಂದಿರುವ ಮತ್ತೊಬ್ಬ ಶಂಕಿತ ಭಯೋತ್ಪಾದಕನನ್ನು ಸೂಚಿಸುತ್ತದೆ. ಆತ ಇಂಡಿಯನ್ ಮುಜಾಹಿದ್ದೀನ್ (IM) ಸದಸ್ಯನಾಗಿದ್ದದ್ದು ಮಾತ್ರವಲ್ಲದೆ 2007 ಮತ್ತು 2008 ರಲ್ಲಿ ದೇಶಾದ್ಯಂತ ಸಂಭವಿಸಿದ ಪ್ರಮುಖ ಸ್ಫೋಟಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾನೆ ಎಂದು ಶಂಕಿಸಲಾಗಿದೆ.
ಈ ಉಗ್ರನ ಹೆಸರು ಮಿರ್ಜಾ ಶಾದಾಬ್ ಬೇಗ್ ಆಗಿದ್ದು, ಈತ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಯಾಗಿದ್ದಾನೆ. ಬೇಗ್ 2007 ರಲ್ಲಿ ಅದೇ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದು, ಅಧ್ಯಯನ ಮುಗಿದ ತಕ್ಷಣ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಆತ ಕಳೆದ 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಭದ್ರತಾ ಸಂಸ್ಥೆಗಳ ಪ್ರಕಾರ ಈತ ಇತ್ತೀಚಿಗೆ ಅಂದರೆ 2019 ರಲ್ಲಿ ಅಫ್ಘಾನಿಸ್ತಾನದಲ್ಲಿದ್ದ ಎಂಬ ಮಾಹಿತಿಯನ್ನು ಪಡೆದಿವೆ.
ತನಿಖೆಯ ಸಮಯದಲ್ಲಿ, ಮಿರ್ಜಾ ಶಾದಾಬ್ ಬೇಗ್ ಜೈಪುರ ಸ್ಫೋಟಗಳ ಮೊದಲು ಕರ್ನಾಟಕದ ಉಡುಪಿಗೆ ಹೋಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲಿ ಆತ ಡಿಟೋನೇಟರ್‌ಗಳು ಮತ್ತು ಸ್ಫೋಟಕಗಳನ್ನು ಖರೀದಿಸಿದ್ದ ಎಂದು ತಿಳಿದುಬಂದಿದೆ.