Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube
newsics.com
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 127 ನೇ ಸಂಚಿಕೆಯಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಮನ್ ಕಿ ಬಾತ್ನಲ್ಲಿ ಚಿಕ್ಕಮಗಳೂರು ಕಾಫಿ ಬಗ್ಗೆ ಗುಣಗಾನ ಮಾಡಿರುವ ಮೋದಿ, ಬೆಂಗಳೂರಿನ ಯುವ ಪರಿಸರವಾದಿಯ ಕೆಲಸವನ್ನೂ ಶ್ಲಾಘಿಸಿದ್ದಾರೆ.
ವಾರಾಂತ್ಯದಲ್ಲಿ ಗಿಡಗಳನ್ನು ನೆಡುವುದರೊಂದಿಗೆ ಪ್ರಾರಂಭವಾದ ಅವರ ಕೆಲಸವು ಈಗ ಕೆರೆಗಳ ಪುನರುಜ್ಜೀವನದವರೆಗೆ ಬಂದು ನಿಂತಿದೆ ಎಂದು ಹೇಳಿದ್ದಾರೆ.
ಬೆಂಗಳೂರನ್ನು ಹಸಿರಾಗಿಸುತ್ತಿರುವ ಯುವಕ ಬೇರಾರೂ ಅಲ್ಲ, 18 ವರ್ಷಗಳ ಹಿಂದೆ ಛತ್ತೀಸ್‌ಗಢದಿಂದ ಬೆಂಗಳೂರಿಗೆ ಕೆಲಸ ಅರಸಿ ಬಂದ ಸಾಫ್ಟ್‌ವೇರ್ ಎಂಜಿನಿಯರ್ ಕಪಿಲ್ ಶರ್ಮಾ.
ಬೆಂಗಳೂರಿನಲ್ಲಿರುವ ಎಂಜಿನಿಯರ್ ಕಪಿಲ್ ಶರ್ಮಾ ಮೂಲತಃ ಛತೀಸ್ಗಢ್. ಪರಿಸರ ಪ್ರೇಮಿಯಾಗಿರುವ ಕಪಿಲ್ ಶರ್ಮಾ ಅವರು ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗಲು ಹಸಿರು ಕಡಿಮೆಯಾಗುತ್ತಿರುವುದು ಕಾರಣ ಎಂದು ತಿಳಿದುಕೊಂಡರು.
ಈ ಸಮಸ್ಯೆಗೆ ಏನಾದರೂ ಪರಿಹಾರ ಹುಡುಕಲು ತೀರ್ಮಾನಿಸಿದರು. ಆಗ ಅವರ ಗಮನಕ್ಕೆ ಬಂದಿದ್ದು ವಾರಾಂತ್ಯದ ಸಮಯದಲ್ಲಿ ಗಿಡ ನೆಡುವ ಕಾರ್ಯ.
ಕಪಿಲ್ ಶರ್ಮಾ ಅವರು 2007ರಲ್ಲಿ ಆರಂಭಿಸಿದ ವಾರಾಂತ್ಯದ ಸಮಯದಲ್ಲಿ ಗಿಡ ನೆಡುವ ಕಾರ್ಯ ಇಂದು ಎಲ್ಲೆಡೆ ಮೆಚ್ಚುಗೆ ಪಾತ್ರವಾಗಿದೆ. ಕಪಿಲ್ ಶರ್ಮಾ ತಾವು ಇರುವ ಮನೆಯ ಸಮೀಪ ಮತ್ತು ಕಚೇರಿಗೆ ಹೋಗುವ ದಾರಿಯಲ್ಲಿ ನೂರಾರು ಸಸಿಗಳನ್ನು ನೆಟ್ಟು ಪೋಷಿಸಿದ್ದಾರೆ. ಅವರ ಈ ನಿರ್ಧಾರದಿಂದಾಗಿ ಇಂದು ಬೆಂಗಳೂರು ನಗರದಾದ್ಯಂತ ಅನೇಕ ಮರಗಳು ಹೆಮ್ಮರವಾಗಿ ಬೆಳೆದಿದ್ದು, ಜನರಿಗೆ ನೆರಳು, ಶುದ್ಧ ಗಾಳಿ ನೀಡುತ್ತಿರುವುದು ಶ್ಲಾಘನೀಯ ಎಂದು ಮೋದಿ ಹೇಳಿದ್ದಾರೆ.
ಮನ್ ಕಿ ಬಾತ್ನಲ್ಲಿ ಭಾರತೀಯ ಕಾಫಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿರುವ ಬಗ್ಗೆ ಮೋದಿ ಮಾತನಾಡಿದ್ದಾರೆ. ಇದೇ ವೇಳೆ ಕರ್ನಾಟಕ ಕಾಫಿಗೆ ಮೋದಿ ಫಿದಾ ಆಗಿದ್ದಾರೆ. ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಬೆಳೆಯುವ ಕಾಫಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ ಎಂದು ಗುಣಗಾನ ಮಾಡಿದ್ದಾರೆ.
ಇನ್ನು ಕರ್ನಾಟಕದ ಮುಧೋಳ ನಾಯಿ ಬಗ್ಗೆಯೂ ಪ್ರಸ್ತಾಪಿಸಿರುವ ಪ್ರಧಾನಿ ಮೋದಿ, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ತಮ್ಮ ತಂಡಗಳಲ್ಲಿ ಭಾರತೀಯ ತಳಿಯ ಶ್ವಾನಗಳ ಸಂಖ್ಯೆಯನ್ನು ಹೆಚ್ಚಿಸಿವೆ ಎಂದು ಮೋದಿ ಹೇಳಿದ್ದಾರೆ.
ಸುಮಾರು 5 ವರ್ಷಗಳ ಹಿಂದೆ ನಾನು ಈ ಕಾರ್ಯಕ್ರಮದಲ್ಲಿ ಭಾರತೀಯ ತಳಿಯ ನಾಯಿಗಳ ಬಗ್ಗೆ ಚರ್ಚಿಸಿದ್ದು ನಿಮ್ಮಲ್ಲಿ ಹಲವರಿಗೆ ನೆನಪಿರಬಹುದು. ಭದ್ರತಾ ಪಡೆಗಳು ನಮ್ಮ ಪರಿಸರ ಮತ್ತು ಪರಿಸ್ಥಿತಿಗಳಿಗೆ ಸುಲಭವಾಗಿ ಹೊಂದಿಕೊಳ್ಳುವಂತಹ ಭಾರತೀಯ ತಳಿಯ ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ನಾನು ಒತ್ತಾಯಿಸಿದ್ದೆ. ನಮ್ಮ ಭದ್ರತಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಶ್ಲಾಘನೀಯ ಪ್ರಯತ್ನಗಳನ್ನು ಮಾಡಿವೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ತಮ್ಮ ತುಕಡಿಯಲ್ಲಿ ಭಾರತೀಯ ತಳಿಯ ನಾಯಿಗಳ ಸಂಖ್ಯೆಯನ್ನು ಹೆಚ್ಚಿಸಿವೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರ ಆಶಯದಂತೆ ಬಿಎಸ್ಎಫ್ ಎರಡು ದೇಸಿ ತಳಿಗಳಾದ ಉತ್ತರ ಪ್ರದೇಶದ ರಾಂಪುರ್ ಹೌಂಡ್ ಮತ್ತು ಬಾಗಲಕೋಟೆ ಜಿಲ್ಲೆಯ ಮೂಲದ ಮುಧೋಳ ನಾಯಿಗಳಿಗೆ ತರಬೇತಿ ನೀಡಿ ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನ ತೇಕನ್‌ಪುರದಲ್ಲಿರುವ ಬಿಎಸ್‌ಎಫ್‌ನ ರಾಷ್ಟ್ರೀಯ ಶ್ವಾನ ತರಬೇತಿ ಕೇಂದ್ರದಲ್ಲಿ ಉತ್ತರ ಪ್ರದೇಶದ ರಾಂಪುರ್ ಹೌಂಡ್ ಮತ್ತು ಮುಧೋಳ್ ನಾಯಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
https://www.newsics.com/2025/10/26/young-man-commits-suicide-after-seeing-the-marriage-certificate-of-the-girl-he-loved/
https://www.newsics.com/2025/10/26/young-man-commits-suicide-after-seeing-the-marriage-certificate-of-the-girl-he-loved/