Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ (RSS) ಪಥಸಂಚಲನಕ್ಕೆ ಅನುಮತಿ ನಿರಾಕರಣೆ ಹಿನ್ನೆಲೆ ಡಿಸಿ ಕ್ರಮ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಹೈಕೋರ್ಟ್ ನವೆಂಬರ್ 2ರಂದು ಪಥಸಂಚಲನಕ್ಕೆ ಅನುಮತಿ ನೀಡಿದೆ.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಿರ್ಬಂಧಿಸಲು ಹೊರಟವರಿಗೆ ಮುಖಭಂಗವಾಗಿದೆ. ಇಂದಿನ ನ್ಯಾಯಾಲಯದ ತೀರ್ಪು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಲು ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದೆಯಲ್ಲದೇ, ದಿನಬೆಳಗಾದರೆ ಸಂವಿಧಾನದ ಬಗ್ಗೆ ಬೊಗಳೆ ಮಾತನಾಡುವವರಿಗೆ ತಕ್ಕ ಪಾಠ ಹೇಳಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪೋಸ್ಟ್ ಮಾಡಿದ್ದಾರೆ.
ನ.2ರಂದು ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಅನುಮತಿ ನೀಡಿದ ಘನ ಉಚ್ಛ ನ್ಯಾಯಾಲಯದ ತೀರ್ಪು ಜನತಂತ್ರದ ವಿಜಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಿಗೆ ಕಾನೂನು ಸುವ್ಯವಸ್ಥೆಯ ಷರತ್ತು ವಿಧಿಸಿ ಅನುಮತಿ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ, ಆದರೆ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಸಿರುಗಟ್ಟಿಸಲು ಹೋದರೆ ದೇಶದ ಸಂವಿಧಾನ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಸಂದೇಶ ಇಂದಿನ ತೀರ್ಪಿನ ಮೂಲಕ ರವಾನೆಯಾಗಿದೆ,
ಚಿತ್ತಾಪುರದಲ್ಲಿ ಸಂವಿಧಾನದ ಹೆಸರಿನಲ್ಲಿ ಬೊಗಳೆ ಬಿಡುವವರಿಂದಲೇ ಸಾಂವಿಧಾನಿಕ ಹಕ್ಕು ಕಸಿಯಲಾಗುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಸಂಭ್ರಮಾಚರಣೆಗೆ ತಹಸೀಲ್ದಾರರ ಮೂಲಕ 12 ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಿಲ್ಲವೆಂದು ಅನುಮತಿ ನಿರಾಕರಿಸಿರುವ ಪರಿ ಉತ್ತರ ಕೋರಿಯಾದ ತಿಕ್ಕಲು ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಆಡಳಿತ ವೈಖರಿಯನ್ನು ನೆನಪಿಸುತ್ತಿದೆ ಎಂದು ಮತ್ತೊಂದು ಪೋಸ್ಟ್ ನಲ್ಲಿ ತಿವಿದಿದ್ದಾರೆ.
ಚಿತ್ತಾಪುರದಲ್ಲಿ ಸದ್ಯ ಆರಂಭವಾಗಿರುವುದು ಸರ್ವಾಧಿಕಾರಿ ಆಡಳಿತ ವರ್ಸಸ್ ಪ್ರಜಾಪ್ರಭುತ್ವದ ನಡುವಿನ ಸಮರ. ಇದನ್ನು ಸವಾಲಾಗಿ ಸ್ವೀಕರಿಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಲು ಭಾರತೀಯ ಜನತಾ ಪಾರ್ಟಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಬಿಂದಾಸ್’ ಸಿನಿಮಾ ನಟಿ ದಾಂಪತ್ಯದಲ್ಲಿ ಬಿರುಕು!; ಗಂಡನ ಹೆಸರು ಡಿಲೀಟ್ ಮಾಡಿದ ಚೆಲುವೆ