newsics.com
ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು ಮಂಜೂರಾಗಿದೆ.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ಮಹೇಶ್ ಶೆಟ್ಟಿ ತಿಮರೋಡಿಗೆ ಶನಿವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಶನಿವಾರ ನಡೆದ ಮಧ್ಯಾಹ್ನದ ಕಲಾಪದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಅವರು ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದರು.
ಆರೋಪಿ ಪರ ವಕೀಲ ವಿಜಯ್ ವಾಸು ಪೂಜಾರಿ ಅವರು ವಾದ ಮಂಡಿಸಿ, ನನ್ನ ಕಕ್ಷಿದಾರ ಹಿಂದೂ ಮುಖಂಡನಾಗಿದ್ದು, ಅನ್ಯಧರ್ಮದ ಬಗ್ಗೆ ಮಾತನಾಡಿಲ್ಲ. ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಇವರ ವಿರುದ್ಧ ದಾಖಲಾದ ಸೆಕ್ಷನ್ಗಳು ಸಾರ್ವಜನಿಕ ಶಾಂತಿ ಭಂಗಕ್ಕೆ ಅನ್ವಯಿಸುವಂತದ್ದು. ಆದ್ರೆ ಈ ಘಟನೆಗೆ ಅನ್ವಯಿಸುವುದಿಲ್ಲ. ಈ ವಿಡಿಯೋದಿಂದ ರಾಜ್ಯದ ಎಲ್ಲಿಯೂ ಶಾಂತಿಭಂಗ ಉಂಟಾಗಿಲ್ಲ ಎಂದು ವಾದಿಸಿದರು.
ಪ್ರಕರಣದಲ್ಲಿ ದೂರುದಾರ ರಾಜೀವ್ ಕುಲಾಲ್ ಅವರ ಪರವಾಗಿ ಅಭಿಯೋಜನೆಗೆ ಸಹಕರಿಸಲು ಅವಕಾಶ ಕಲ್ಪಿಸುವಂತೆ ಮಂಗಳೂರಿನ ಹಿರಿಯ ನ್ಯಾಯವಾದಿ ಶಂಭು ಶರ್ಮ ವಕಾಲತ್ತು ಸಲ್ಲಿಸಿದ್ದರು. ಇದಕ್ಕೆ ಆರೋಪಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು.
ತನಿಖಾಧಿಕಾರಿ ಅಶೋಕ್ ಮಾಲಭಾಗಿ ನ್ಯಾಯಾಲಯಕ್ಕೆ ಹಾಜರಾಗಿ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದ್ದರಿಂದ 1 ಗಂಟೆಯ ಅವಧಿಯೊಳಗಾಗಿ ಹಾಜರು ಪಡಿಸುವಂತೆ ಸೂಚಿಸಲಾಗಿತ್ತು.
ಬ್ರಹ್ಮಾವರ ಸಿಪಿಐ ಗೋಪಿಕೃಷ್ಣ, ಪಿಎಸ್ಐ ಅಶೋಕ್ ಮಾಲಭಾಗಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಮಧ್ಯಾಹ್ನ ಸುಮಾರು 1.30ಕ್ಕೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ನಂತರ ಪೊಲೀಸರು ಅವರನ್ನು ಉಡುಪಿ ನಗರ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದರು.
ಮಧ್ಯಾಹ್ನ 4.40ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
TikTok may make a comeback in India ಐದು ವರ್ಷ ಬಳಿಕ ಮತ್ತೆ ಭಾರತದಲ್ಲಿ ಟಿಕ್ ಟಾಕ್ ಸದ್ದು ಸಾಧ್ಯತೆ
Dharmasthala case ದೂರುದಾರ ಚಿನ್ನಯ್ಯ ಬಂಧನ: ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದೇನು?