newsics.com
ಕಲಿಗಾಲದಲ್ಲಿ ಈಗೇನಿದ್ರೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನದ್ದೇ (AI) ಹವಾ. ಈ ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ ಚಾಕಚಕ್ಯತೆ ಇದೀಗ ತಿಮ್ಮಪ್ಪನ ಭಕ್ತರ ನೆರವಿಗೂ ಬರಲಿದೆ. ತಿರುಪತಿ ತಿಮ್ಮಪ್ಪನ ದೇವಾಲಯ ಇಡೀ ವಿಶ್ವದಲ್ಲೇ AI ಅಳವಡಿಸಿಕೊಳ್ಳುವ ಮೊಟ್ಟ ಮೊದಲ ದೇವಾಲಯ ಅನ್ನೋ ಖ್ಯಾತಿಗೆ ಪಾತ್ರವಾಗುತ್ತಿದೆ.
ಹೌದು, ತಿರುಮಲ ತಿಮ್ಮಪ್ಪನ ದರ್ಶನಕ್ಕಾಗಿ ಕಾಯುವ ಸಮಯವನ್ನು ಕಡಿಮೆ ಮಾಡಲು ಗೂಗಲ್ ಮತ್ತು ಟಿಸಿಎಸ್‌ನಂತಹ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳ ಸಹಯೋಗದೊಂದಿಗೆ ಸುಧಾರಿತ AI ತಂತ್ರಜ್ಞಾನವನ್ನು ಬಳಸುವ ಯೋಜನೆಯನ್ನು ಟಿಟಿಡಿ ಘೋಷಿಸಿತ್ತು.
ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಸರತಿ ಸಾಲುಗಳು ಮತ್ತು ವೈಕುಂಠ ಸಂಕೀರ್ಣಗಳಲ್ಲಿ ದೀರ್ಘ ಸಮಯ ಕಾಯುತ್ತಿರುವ ಸಾಮಾನ್ಯ ಭಕ್ತರ ವಿಶಾಲ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಗೂಗಲ್, ಟಿಸಿಎಸ್ ಮತ್ತು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಸುಧಾರಿತ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ನಿಗದಿತ ಸಮಯದೊಳಗೆ ಭಕ್ತರಿಗೆ ದರ್ಶನ ನೀಡಲು ಟಿಟಿಡಿ ಮಂಡಳಿ ನಿರ್ಧರಿಸಿದೆ” ಎಂದು ಟಿಟಿಡಿ ಅಧ್ಯಕ್ಷ ಬಿಆರ್ ನಾಯು ಮಂಡಳಿಯ ಸಭೆಯಲ್ಲಿ ಹೇಳಿದ್ದರು
ಆದರೆ ಎಐ ತಂತ್ರಜ್ಞಾನ ಬಳಕೆಗೆ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶ್ರೀ ಸುಬ್ರಮಣ್ಯಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯನ್ನು ಕೈಬಿಡುವಂತೆ ಒತ್ತಾಐ ಮಾಡಿದ್ದರು. ಆದರೆ ಟಿಟಿಡಿ ಮಂಡಳಿ ಇದಕ್ಕೆ ಸ್ಪಷ್ಟನೆ ನೀಡಿದ್ದು, ಭಕ್ತರು ದರ್ಶನಕ್ಕಾಗಿ ಕಾಯುವ ಸಮಯವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದೆ. ಈ ಹಿಂದೆಯೂ ಇಂತಹದ್ದೇ ಕಾರ್ಯಕ್ರಮ ರೂಪಿಸಲು ಟಿಟಿಡಿ ಮುಂದಾಗಿತ್ತು, ಆದರೆ ಟಿಟಿಡಿ ಕಮಿಟಿಯಲ್ಲಿ ಒಗ್ಗಟ್ಟು ಮೂಡದ ಕಾರಣ ಯೋಜನೆಯನ್ನು ಕೈಬಿಡಲಾಗಿತ್ತು.
ಈ ಯೋಜನೆಯ ಅಡಿ ಗರ್ಭಗುಡಿಯಲ್ಲಿ ಚಲಿಸುವ ಕಾರ್ಪೆಟ್ ಅಳವಡಿಸುವ ಯೋಜನೆ ಮಾಡಲಾಗಿತ್ತು. ಆದರೆ ಶಾಸ್ತ್ರಗಳ ಕಾರಣದಿಂದ ಯೋಜನೆಯನ್ನು ಕೈ ಬಿಡಲಾಗಿತ್ತು. ಆದರೆ ಈಗ ನೌಕರರ ವರ್ಗ ಟಿಟಿಡಿ ಪ್ರಸ್ತಾವನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಎಐ ತಂತ್ರಜ್ಞಾನ ಬಳಕೆಯಿಂದ ಸುದೀರ್ಘ ಕಾಯುವಿಕೆಗೆ ಬ್ರೇಕ್ ಹಾಕಲಿದೆ. ಜೊತೆಗೆ ಯಾತ್ರಾರ್ಥಿಗಳಿಗೆ ತಮ್ಮ ದರ್ಶನ ಸಮಯದ ಬಗ್ಗೆ ಮುಂಚಿತವಾಗಿ ಮಾಹಿತಿಯನ್ನು ಒದಗಿಸಬಹುದು. ಇದರಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡುವ ಸಮಯವನ್ನು ಖಚಿತಪಡಿಸಿಕೊಂಡು ಕ್ಷೇತ್ರಕ್ಕೆ ಆಗಮಿಸುವ ಅಥವಾ ಅದರಂತೆ ತಮ್ಮ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವ ಅವಕಾಶವನ್ನು ಸೃಷ್ಟಿಸಬಹುದು ಎಂದು ತಿಳಿಸಿದ್ದಾರೆ.
https://www.newsics.com/2025/08/06/explosion-at-oxygen-plant-two-dead-many-injured/