newsics.com
ಹುಬ್ಬಳ್ಳಿ: 11 ವರ್ಷಗಳ ಪ್ರೀತಿಗೆ ದುರಂತ ಅಂತ್ಯ ಸಂಭವಿಸಿದ್ದು, ಮದುವೆಗೆ ಮುನ್ನ ಗರ್ಭಿಣಿಯಾಗಿದ್ದ ಯುವತಿ ದಿವ್ಯಾ ಸಲವಾದಿಯ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಹುಬ್ಬಳ್ಳಿಯ ಮಂಟೂರು ರಸ್ತೆಯ ಶೀಲಾ ಕಾಲೋನಿಯಲ್ಲಿ ನಡೆದಿದೆ.
ದಿವ್ಯಾ ಸಲವಾದಿ ಮತ್ತು ಚರಣ್ ಅನಂತಪುರ ಎಂಬ ಯುವಕನ ನಡುವೆ ಕಳೆದ 11 ವರ್ಷಗಳಿಂದ ಪ್ರೇಮ ಸಂಬಂಧ ಇತ್ತು. ಈ ಸಂಬಂಧದ ಫಲವಾಗಿ ದಿವ್ಯಾ ಗರ್ಭಿಣಿಯಾಗಿದ್ದರು. ಇದರಿಂದಾಗಿ ನೀನು ಮದುವೆ ಮಾಡಿಕೊಳ್ಳುವಂತೆ ಬಿಗಿಪಟ್ಟು ಹಿಡಿದ ಹಿನ್ನೆಲೆಯಲ್ಲಿ ದಿವ್ಯಾಳ ಕುತ್ತಿಗೆಗೆ ಚರಣ್ ಇತ್ತೀಚೆಗೆ (7 ದಿನಗಳ ಹಿಂದೆ) ತಾಳಿ (ಅರಿಶಿಣ ಕೊಂಬು) ಕಟ್ಟುವ ಮೂಲಕ ಮದುವೆಯಾಗಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಆದರೆ, ಮದುವೆಯಾಗಿ ಒಂದೇ ವಾರಕ್ಕೆ ದಿವ್ಯಾ ಗರ್ಭಿಣಿಯಾಗಿದ್ದರೂ ಸಾವನ್ನಪ್ಪಿರುವುದು ಚರ್ಚೆಗೆ ಗ್ರಾಸವಾಗಿದೆ.
ದಿವ್ಯಾಳ ಕುಟುಂಬದವರ ಮಾಹಿತಿ ಪ್ರಕಾರ, ಚರಣ್ ಯುವತಿಗೆ ಅತಿಯಾದ ಅಬಾರ್ಷನ್ ಟ್ಯಾಬ್ಲೆಟ್ ನೀಡಿದ್ದಾನೆ ಎಂದು ಆಕೆಯ ಪೋಷಕರು ದೂರಿದ್ದಾರೆ. ಅತಿಯಾದ ಗರ್ಭ ನಿರೋಧಕ ಮಾತ್ರೆಗಳನ್ನು ನೀಡಿದ್ದರಿಂದ ದಿವ್ಯಾಳಿಗೆ ತೀವ್ರ ರಕ್ತಸ್ರಾವವಾಗಿದ್ದು, ಕೂಡಲೇ ಚಿಟಗುಪ್ಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ದಿವ್ಯಾ ಮೃತಪಟ್ಟಿದ್ದು, ಆಕೆಯ ಹೊಟ್ಟೆಯಲ್ಲಿದ್ದ ಚಿಕ್ಕ ಮಗುವೂ ಸಾವಿಗೀಡಾಗಿದೆ.
ದಿವ್ಯಾಳ ಸಾವಿಗೆ ಚರಣ್ ನೇರ ಕಾರಣ ಎಂದು ದಿವ್ಯಾಳ ಸಂಬಂಧಿಕರು ಆರೋಪ ಮಾಡಿದ್ದಾರೆ. ಅವರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಚರಣ್ ವಿಚಾರಣೆ ಕೈಗೊಂಡಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಘಟನೆಯಿಂದ ಹುಬ್ಬಳ್ಳಿ ನಗರದ ಶೀಲಾ ಕಾಲೋನಿಯಲ್ಲಿ ಆತಂಕ ವಾತಾವಾರಣ ನಿರ್ಮಾಣವಾಗಿದೆ. ಪ್ರೇಮ ಸಂಬಂಧದ ದುಷ್ಪರಿಣಾಮ ಯಾವ ಮಟ್ಟಕ್ಕೆ ತಲುಪಬಹುದು ಎಂಬುದರ ಭೀತಿ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.