newsics.com
ರಾಯ್‌ಪುರ(ಛತ್ತೀಸ್‌ಗಢ): ನಿಧಿಯಾಸೆಗಾಗಿ ಮುಂಗೇಲಿ ಜಿಲ್ಲೆಯ ಕೋಶಾಬಾಡಿ ಗ್ರಾಮದಲ್ಲಿ ಏಳು ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ಬಲಿ ಕೊಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.
ಬಾಲಕಿ ತನ್ನ ತಾಯಿಯ ಪಕ್ಕದಲ್ಲಿ ರಾತ್ರಿ ಮಲಗಿದ್ದ ವೇಳೆ ಈ ಕೃತ್ಯ ನಡೆದಿದೆ.
ರಾತ್ರಿ ಇದ್ದಕ್ಕಿದ್ದಂತೆ ಬಾಲಕಿ ನಾಪತ್ತೆಯಾಗಿದ್ದು ಕುಟುಂಬದವರಲ್ಲಿ ಆತಂಕ ಮೂಡಿಸಿತು. ಭಯಭೀತರಾಗಿ ಹುಡುಕಿದರೂ ಬಾಲಕಿ ಪತ್ತೆಯಾಗಲಿಲ್ಲ.
ಕೆಲವು ದಿನಗಳ ನಂತರ, ಗ್ರಾಮದ ಸಮೀಪದ ಸ್ಮಶಾನದಲ್ಲಿ ಒಂದು ಅಸ್ಥಿಪಂಜರ ಕಂಡುಬಂತು. ತನಿಖೆಯಲ್ಲಿ ಇದು ಕಾಣೆಯಾದ ಬಾಲಕಿಯದ್ದೇ ಎಂಬುದು ದೃಢಪಟ್ಟಿತು.
ಪೊಲೀಸರ ತನಿಖೆಯಲ್ಲಿ ಬಾಲಕಿಯ ಅತ್ತಿಗೆಯೇ ಈ ಕೃತ್ಯಕ್ಕೆ ಪ್ಲ್ಯಾನ್ ಮಾಡಿದ್ದಳು ಎಂದು ಬಯಲಾಯಿತು.
ನಿಧಿ ಪಡೆಯಲು ಬಾಲಕಿಯನ್ನು ಬಲಿಕೊಡಬೇಕೆಂದು ಸ್ಥಳೀಯ ಮಾಂತ್ರಿಕ ಸಲಹೆ ನೀಡಿದ್ದನು. ಅತ್ತಿಗೆಯು ₹500ಗೆ ಸ್ಥಳೀಯ ವ್ಯಕ್ತಿಯೊಬ್ಬನನ್ನು ಕೂಲಿಗೆ ನೇಮಿಸಿ, ಬಾಲಕಿಯನ್ನು ಅಪಹರಿಸಿದ್ದಳು. ಆರೋಪಿಯು ಬಾಲಕಿಯನ್ನು ಸ್ಮಶಾನದ ಸಮೀಪದ ಒಂಟಿಯಾದ ಸ್ಥಳಕ್ಕೆ ಕರೆದೊಯ್ದು, ವಾಮಾಚಾರಕ್ಕಾಗಿ ಕೊಲೆ ನಡೆಸಿದ್ದಾನೆ.
ಮುಂಗೇಲಿ ಪೊಲೀಸರು ಈಗಾಗಲೇ ಐವರನ್ನು ಬಂಧಿಸಿದ್ದಾರೆ, ಇದರಲ್ಲಿ ಬಾಲಕಿಯ ಅತ್ತಿಗೆ, ಅಪಹರಣಕಾರ, ಮತ್ತು ಮಾಂತ್ರಿಕ ಕೂಡ ಸೇರಿದ್ದಾರೆ. ಈ ಘಟನೆಯು ಸ್ಥಳೀಯ ಸಮುದಾಯದಲ್ಲಿ ಆತಂಕ ಮತ್ತು ಆಕ್ರೋಶವನ್ನು ಉಂಟುಮಾಡಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.