newsics.com
ಪ್ರತಿಯೊಬ್ಬರ ಬದುಕಿನಲ್ಲೂ ಸಾಕಷ್ಟು ಗುರುಗಳಿರುತ್ತಾರೆ. ಕೇವಲ ಅಕ್ಷರ ಕಲಿಸಿದವರಲ್ಲ, ಜೀವನ ಪಾಠ ಹೇಳಿಕೊಡುವ ಅಪ್ಪ, ಅಮ್ಮನಿಂದ ಹಿಡಿದು ಅಪರಿಚಿತರವರೆಗೆ ಏನೊಂದು ಒಳ್ಳೆಯದು ಕಲಿಸಿದವರೆಲ್ಲ ಗುರುವೇ. ಇಂಥ ಗುರುಗಳಿಗೆ ಧನ್ಯವಾದ ಹೇಳಲೊಂದು ವಿಶೇಷ ದಿನ ಗುರು ಪೂರ್ಣಿಮೆ. ಜುಲೈ 10 ರಂದು ಈ ವರ್ಷದ ಗುರು ಪೂರ್ಣಿಮಾವನ್ನು ಆಚರಿಸಲಾಗುವುದು.
ವರ್ಷದಲ್ಲಿ ಹಲವು ಹುಣ್ಣಿಮೆಗಳು ಬರುವುದು. ಅವುಗಳಲ್ಲಿ ಕೆಲವು ಹುಣ್ಣಿಮೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಅದರಲ್ಲಿ ಒಂದು ಗುರು ಪೂರ್ಣಿಮಾ. ಈ ದಿನ ಗುರುಗಳಿಗೆ ವಿಶೇಷವಾದ ಮಹತ್ವವನ್ನು ನೀಡುವ ಮೂಲಕ ವರ್ಣನೆ ಮಾಡಲಾಗುತ್ತದೆ.
ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಇತರ ದಿನಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಗುರು ಅನ್ನುವ ಶಬ್ದ ‘ಗು’ ಮತ್ತು ‘ರು’ ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ‘ಗು’ ಅಂದರೆ ಅಂಧಕಾರ ಅಥವಾ ಅಜ್ಞಾನ. ‘ರು’ ಅಂದರೆ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ.
ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿಯೂ ಈ ಹಬ್ಬವನ್ನು ಆಚರಿಸುತ್ತಾರೆ. ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದಲ್ಲೇ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದು ಕರೆಯಲಾಗುತ್ತದೆ.
ವಿಧಿವಿಧಾನಗಳ ಪ್ರಕಾರ, ಗುರು ಪೂರ್ಣಿಮೆಯಂದು ಶಿಷ್ಯನು ಸ್ನಾನ ಮಾಡಿ, ಶುಭ್ರವಾದ ಬಟ್ಟೆಗಳನ್ನು ಧರಿಸಿ, ಪೂಜೆಯನ್ನು ಮಾಡಿ, ವ್ಯಾಸರಿಗೆ ಪ್ರಾರ್ಥನೆ ಮತ್ತು ಮಾಲೆಗಳನ್ನು ಅರ್ಪಿಸಬೇಕು. ನಂತರ ತಮ್ಮ ಗುರುಗಳನ್ನು ಭೇಟಿ ಮಾಡಿ, ಅವರನ್ನು ಸ್ಥಿರ ಸ್ಥಳದಲ್ಲಿ ಕೂರಿಸಬೇಕು ಮತ್ತು ಅವರಿಗೆ ಹಾರವನ್ನು ಅರ್ಪಿಸಬೇಕು. ಅದರ ನಂತರ, ನಿಮ್ಮ ಗುರುಗಳಿಗೆ ಬಟ್ಟೆ, ಹಣ್ಣುಗಳು, ಹೂವುಗಳು, ಮಾಲೆ ಮತ್ತು ದಕ್ಷಿಣೆಯನ್ನು ಸ್ವಲ್ಪ ಹಣದ ರೂಪದಲ್ಲಿ ಅರ್ಪಿಸಿ ನಂತರ ಅವರ ಆಶೀರ್ವಾದವನ್ನು ಪಡೆಯಬೇಕು. ಈ ದಿನದಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕರನ್ನು ಗೌರವಿಸುವ ವಿಶೇಷ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ.