newsics.com
ಶಿವಮೊಗ್ಗ:ದೇಶದ ಎರಡನೇ ಅತಿ ಉದ್ದದ ಕೆಬಲ್ ಸೇತುವೆಯಾದ ಸಿಗಂದೂರು ಸೇತುವೆ ಜುಲೈ 14ರಂದು ಲೋಕಾರ್ಪಣೆ ಆಗಲಿದೆ. 470 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಳಸವಳ್ಳಿ- ಅಂಬಾರಗೋಡ್ಲು ಸೇತುವೆ ಅಥವಾ ಸಿಗಂದೂರು ಸೇತುವೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಶನಿವಾರ (ಜು.05) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು ಇಡಲು ರಾಜ್ಯ ಸರಕಾರ ಶಿಫಾರಸು ಮಾಡಲಿ ಎಂದು ಅಗ್ರಹಿಸಿದರು.
ಲಿಂಗನಮಕ್ಕಿ ಜಲಾಶಯ ನಿರ್ಮಾಣದ ನಂತರ ಸಂಪರ್ಕ ತೊಂದರೆಯಾಗಿತ್ತು. ಹೋರಾಟಗಾರರ ತಪಸ್ಸಿನ ಫಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಮುಖಂಡರ ಪ್ರಯತ್ನದ ಫಲದಿಂದ ಸೇತುವೆ ನಿರ್ಮಾಣವಾಗಿದೆ ಎಂದು ರಾಘವೇಂದ್ರ ಹೇಳಿದರು.
ಈ ಸೇತುವೆ ಸುಮಾರು 2.14 ಕಿ.ಮೀ ಉದ್ದ ಹಾಗೂ 16 ಮೀಟರ್ ಅಗಲವಿದೆ. ಸೇತುವೆ ಕಾಮಗಾರಿಯು 2020ರ ಡಿಸೆಂಬರ್ನಲ್ಲಿ ಪ್ರಾರಂಭವಾಗಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕ ಹಾಗೂ ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದ ಹಿನ್ನೀರು ಸಂಗ್ರಹವಾಗಿದ್ದ ಕಾರಣದಿಂದ ಕಾಮಗಾರಿ ನಿಧಾನವಾಗಿ ನಡೆದಿತ್ತು. ಆದರೆ, ಇತ್ತೀಚಿನ ಕೆಲ ತಿಂಗಳಲ್ಲಿ ಕಾಮಗಾರಿ ಭಾರೀ ವೇಗ ಪಡೆದುಕೊಂಡಿತ್ತು. ಈ ಸೇತುವೆಯಿಂದ ಶರಾವತಿ ಹಿನ್ನೀರು ಭಾಗದ ದಶಕಗಳ ಸಮಸ್ಯೆ ಈಡೇರಿದಂತಾಗಿದೆ. ಇನ್ನೊಂದೆಡೆ ಇಡೀ ವಲಯದ ಪ್ರವಾಸೋದ್ಯಮಕ್ಕೆ ದೊಡ್ಡ ಬೂಸ್ಟರ್ ಸಿಕ್ಕಿದೆ.