newsics.com
ನಾಲ್ಕು ವರ್ಷದ ಅವಳಿ ಮಕ್ಕಳಿಗೆ ಪರಸ್ಪರ ಮದುವೆ ಮಾಡಿದಂತಹ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
4 ವರ್ಷದ ಒಂದು ಹೆಣ್ಣು ಒಂದು ಗಂಡು ಅವಳಿ ಮಕ್ಕಳಿಗೆ ಮದುವೆ ಮಾಡಿದ್ದು, ಈ ವೀಡಿಯೋ ಅನೇಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ಅವಳಿಗಳನ್ನು ನಮ್ಮ ಸಂಸ್ಕೃತಿ ಸೇರಿದಂತೆ ಬಹುತೇಕ ಸಂಸ್ಕೃತಿಯಲ್ಲಿ ಒಂದೇ ತಾಯಿಯ ಗರ್ಭದಿಂದ ಜನಿಸಿದ ಕಾರಣಕ್ಕೆ ಸೋದರರು ಅಥವಾ ಸೋದರಿಯರು ಎಂದು ಭಾವಿಸಲಾಗುತ್ತದೆ. ಅಣ್ಣ ತಂಗಿ ಹಾಗೂ ಅಕ್ಕ ತಮ್ಮನ ಮಧ್ಯೆ ಹೇಗೆ ಮದುವೆ ನಿಷಿದ್ಧವೋ ಹಾಗೆಯೇ ಹಾಗೆಯೇ ಅವಳಿಗಳ ನಡುವೆ ಯಾರೂ ಮದುವೆ ಮಾಡುವುದಿಲ್ಲ, ಆದರೆ ಥೈಲ್ಯಾಂಡ್‌ನಲ್ಲಿ ಒಂದೇ ತಾಯಿ ಗರ್ಭದಲ್ಲಿ ಜನಿಸಿದ ಅವಳಿಗಳಿಗೆ ಮದುವೆ ಮಾಡಿಸಲಾಗಿದೆ. ಈ ವೀಡಿಯೋದಲ್ಲಿ ಅವಳಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ಮದುವೆಯ ಸಂಪ್ರದಾಯದಲ್ಲಿ ಭಾಗಿಯಾಗಿರುವುದನ್ನು ಕಾಣಬಹುದಾಗಿದೆ.
ಥೈಲ್ಯಾಂಡ್‌ನ ಬೌದ್ಧ ಧರ್ಮದಲ್ಲಿ ಈ ಸಾಂಕೇತಿಕ ಮದುವೆಯ ಆಚರಣೆಯೂ ಸಂಪ್ರದಾಯವಂತೆ
ರೆಸಾರ್ಟ್‌ನಲ್ಲಿ ನಡೆದ ಈ ಅದ್ದೂರಿ ಆಚರಣೆಯಲ್ಲಿ ಥಟ್ಸಾನಪೋರ್ನ್ ಸೊರ್ನ್‌ಚೈ ಮತ್ತು ಅವರ ಅವಳಿ ಸಹೋದರಿ ಥಟ್ಸಾಥಾರ್ನ್ ಪರಸ್ಪರ ಮದುವೆಯಾಗಿದ್ದಾರೆ. ಈ ಸಮಾರಂಭದಲ್ಲಿ ಬೌದ್ಧಸನ್ಯಾಸಿಗಳು ಭಾಗಿಯಾಗಿದ್ದು, ಅವರಿಗೆ ಅಲಂಕಾರಿಕ ವ್ಯವಸ್ಥೆ ಮಾಡಿರುವುದನ್ನು ಅಲ್ಲಿ ಕಾಣಬಹುದಾಗಿದೆ.
4 ವರ್ಷದ ವಧು ತನ್ನ ಅವಳಿ ಸಹೋದರನಿಗೆ ಹಾರ ಹಾಕಿ ಆತನ ಕೆನ್ನೆಗೆ ಮುತ್ತಿಕ್ಕಿ ವಿವಾಹದ ವಿಧಿ ವಿಧಾನಗಳನ್ನು ನಡೆಸುವುದನ್ನು ಕಾಣಬಹುದಾಗಿದೆ. ಹಲವಾರು ಬೌದ್ಧ ಸನ್ಯಾಸಿಗಳು ಈ ವಿಶಿಷ್ಟ ಆಚರಣೆಯಲ್ಲಿ ಭಾಗಿಯಾಗಿ ಈ ಪುಟ್ಟ ದಂಪತಿಗಳಿಗೆ ಆಶೀರ್ವದಿಸಿದ್ದಾರೆ
ಈ ಮದುವೆಯಲ್ಲಿ ಕುಟುಂಬದವರು ಸಂಪ್ರದಾಯಿಕ ವರದಕ್ಷಿಣೆ ಮೆರವಣಿಗೆಯನ್ನು ಕೂಡ ಆಯೋಜಿಸಿದ್ದರು. ಇದರಲ್ಲಿ ಅವರು 4 ಮಿಲಿಯನ್ ಬಹ್ತ್ ಅಂದರೆ ಅಂದಾಜು 1,05,58,228 ಭಾರತೀಯ ರೂಪಾಯಿಯನ್ನು ವಧುವಿಗೆ ವರದಕ್ಷಿಣೆಯಾಗಿ ನೀಡಲಾಗಿದೆ.
ಥೈಲ್ಯಾಂಡ್‌ನಲ್ಲಿ ಅವಳಿಗಳಿಗೆ ಮದುವೆ ಏಕೆ?
ಥೈಲ್ಯಾಂಡ್‌ನ ಬೌದ್ಧ ಧರ್ಮದಲ್ಲಿ ಒಂದೇ ತಾಯಿ ಗರ್ಭದಲ್ಲಿ ಗಂಡು ಹೆಣ್ಣು ಮಗು ಜೊತೆಯಾಗಿ ಜನಿಸಿದರೆ ಅವರು ಹಿಂದಿನ ಜನ್ಮದಲ್ಲಿ ಪ್ರೇಮಿಗಳು ಆಗಿದ್ದರು.ಹೀಗಾಗಿ ಅವರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಮದುವೆ ಮಾಡದಿದ್ದರೆ ಅದು ದುರಾದೃಷ್ಟಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಅವರ ಹಳೇ ಜನ್ಮದ ನಂಟಿನ ಜೊತೆಗೆ ಈ ದುರಾದೃಷ್ಟ ಅವರನ್ನು ಜೀವನಪೂರ್ತಿ ಕಾಡುತ್ತದೆ. ಹಾಗೆಯೇ ಅವರು ಮದುವೆಯಾಗದೇ ಹೋದರೆ ಅವರಿಗೆ ಅನಾರೋಗ್ಯ ಕಾಡುತ್ತದೆ ಹಾಗೂ ಆಗಾಗ ಅವರು ಹುಷಾರು ತಪ್ಪಿ ಸಾಯಲುಬಹುದು ಎಂಬ ಕಾರಣಕ್ಕೆ ಅವರಿಗೆ ಮದುವೆ ಮಾಡಲಾಗುತ್ತದೆ.