newsics.com
ಮಂಡ್ಯ : ಅರವತ್ತು ವರ್ಷಗಳ ನಂತರ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿದೆ. ಜೂನ್ 30ರ ಸೋಮವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, 1960ರಲ್ಲಿ ಕೃಷ್ಣರಾಜಸಾಗರ ಜಲಾಶಯ ಮೊದಲ ಬಾರಿಗೆ ಜೂನ್‌ನಲ್ಲಿ ತುಂಬಿತ್ತು. ಇದೀಗ ಮತ್ತೆ ತುಂಬಿ ತುಳುಕುತ್ತಿದೆ. ಇದು ನಮ್ಮ ಭಾಗ್ಯ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಿಲ್ಲೆಯ ಶಾಸಕರು, ಮೈಸೂರಿನ ಜನಪ್ರತಿನಿಧಿಗಳು ಕಾವೇರಿ ಬಾಗೀನ ಕಾರ‌್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಕೆ.ಆರ್.ಎಸ್.ತುಂಬಿರುವುದು ಬಹಳ ಜನರಿಗೆ ನಿದ್ದೆ ಬರಲ್ಲ :
ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೆಲ್ಲಾ ರಾಜ್ಯದಲ್ಲಿ ಸರಿಯಾಗಿ ಮಳೆ ಬರಲ್ಲ, ಕೆ.ಆರ್.ಎಸ್. ತುಂಬಲ್ಲ ಎನ್ನುತ್ತಿದ್ದ ಬಹಳ ಜನರಿಗೆ ಪಾಪ ನೋವಾಗ್ತಿದೆ. ಸಿದ್ದರಾಮಯ್ಯ ಬಂದಾಗಲೆಲ್ಲಾ ಬರಗಾಲ ಬರುತ್ತೆ ಅಂತಿದ್ದವರಿಗೆ ಈಗ ನಿದ್ದೆಯೂ ಬರಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದ ಎಲ್ಲ ಕೆರೆ ಕಟ್ಟೆಗಳು ತುಂಬಿವೆ. ಚೆನ್ನಾಗಿ ಮಳೆ ಆಗುತ್ತಿದೆ. ರಾಜ್ಯದ ಜನತೆ ಖುಷಿಯಾಗಿದ್ದಾರೆ. ರಾಜ್ಯದಲ್ಲಿ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಇದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.