newsics.com
ಶ್ರೀನಗರ : ಮೂರ್ನಾಲ್ಕು ದಿನಗಳಿಂದ ಭಾರತ-ಪಾಕಿಸ್ತಾನದ ನಡುವೆ ಗಡಿಯಲ್ಲಿ ವೈಮಾನಿಕ ದಾಳಿ, ಗುಂಡಿನ ದಾಳಿ ನಡೆಯುತ್ತಿತ್ತು. ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಸಂಜೆಯಷ್ಟೇ ಪಾಕಿಸ್ತಾನ ಹಾಗೂ ಭಾರತ ಕದನ ವಿರಾಮ ಘೋಷಿಸಿತ್ತು. ಇದೀಗ ಮತ್ತೆ ಪಾಕಿಸ್ತಾನ ಗಡಿಯಲ್ಲಿ ಬಾಲ ಬಿಚ್ಚಿದ್ದು ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಮತ್ತೆ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿದೆ.
ಜಮ್ಮು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ 4-5 ಬಾರಿ ಸ್ಪೋಟ ಕೇಳಿಸಿದ್ದು, ಶ್ರೀನಗರದಲ್ಲಿ ಬ್ಲಾಕ್ ಔಟ್ ಮಾಡಲಾಗಿದೆ. ಎಲ್ಓಸಿನಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಮತ್ತೆ ಗುಂಡಿನ ದಾಳಿ ನಡೆಸಿದೆ. ಕದನ ವಿರಾಮ ಜಾರಿಯಾದ 3 ಗಂಟೆಗಳಲ್ಲಿ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದೆ. ಅಲ್ಲದೆ ಶ್ರೀನಗರದಲ್ಲಿ 11 ಡ್ರೋನ್‌ಗಳಿಂದ ದಾಳಿ ಮಾಡಿದೆ.
ಸೂಕ್ತ ಪ್ರತ್ಯುತ್ತರ ನೀಡುವಂತೆ ಭಾರತ ಸರ್ಕಾರ ಬಿಎಸ್ಎಫ್ ಗೆ ಸೂಚನೆ ನೀಡಿದೆ. ಗಡಿ ನಿಯಂತ್ರಣ ರೇಖೆ ಯುದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಅಖ್ನೂರ್, ರಜೌರಿ ಹಾಗು ಆರ್ ಎಸ್ ಪುರ ಸೆಕ್ಟರ್ ನಲ್ಲೂ ಪಾಕಿಸ್ತಾನ ಫೈರಿಂಗ್ ಮಾಡಿದೆ ಪಾಕಿಸ್ತಾನ ಸೇನೆ ದಾಳಿಗೆ ಬಿಎಸ್ಎಫ್ ತಕ್ಕ ಪ್ರತ್ಯುತ್ತರ ನೀಡಿದೆ.