newsics.com
ಒಂದು ಕಡೆ ಶಿಕ್ಷಕಿಯರೇ ಶಾಲೆಯಲ್ಲಿ ನಿಂತು ಮಕ್ಕಳ ಮುಂದೆ ಐಟಂ ಸಾಂಗ್‌ಗೆ ಕುಣಿದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ, ಮತ್ತೊಂದು ಕಡೆ ಮಕ್ಕಳೆದುರೇ ಶಿಕ್ಷಕರ ಲವ್ವಿಡವ್ವಿ. ಮಕ್ಕಳು ಜಗಳ ಆಡಿದರೆ ಶಿಕ್ಷಕರು ಬುದ್ಧಿ ಹೇಳಬೇಕು. ಅಂಥದ್ರಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳ ಎದುರು ಜಗಳ ಮಾಡಿಕೊಂಡ ಘಟನೆ ಭೋಪಾಲ್ ನಿಂದ ಸುಮಾರು 300 ಕಿಮೀ ದೂರದಲ್ಲಿರುವ ಮಧ್ಯಪ್ರದೇಶದ ಖಾರ್ಗೋನ್‍ನ ಸರ್ಕಾರಿ ಏಕಲವ್ಯ ಆದರ್ಶ ಶಾಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ವಿಡಿಯೋವನ್ನು formenindia ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ಶಾಲೆಯ ಪ್ರಾಂಶುಪಾಲೆ ಹಾಗೂ ಮಹಿಳಾ ಲೈಬ್ರೆರಿಯನ್ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಈ ಜಗಳವನ್ನು ಲೈಬ್ರೆರಿಯನ್ ತನ್ನ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವೇಳೆಯಲ್ಲಿ ಪ್ರಾಂಶುಪಾಲರು ಸಿಟ್ಟುಗೊಂಡಿದ್ದು, ಲೈಬ್ರೆರಿಯನ್ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಸಹ ಒಡೆದುಹಾಕಿರುವುದನ್ನು ನೋಡಬಹುದು.
ಆ ಬಳಿಕ ಇಬ್ಬರ ನಡುವೆ ಮಾತಿನ ಚಕಾಮಕಿಯೂ ಏರ್ಪಟ್ಟಿದ್ದು, ತದನಂತರದಲ್ಲಿ ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಂಡಿದ್ದಾರೆ. ಜುಟ್ಟು ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ.ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಇಬ್ಬರೂ ಮಹಿಳೆಯರನ್ನು ಪ್ರಾಂಶುಪಾಲ ಪ್ರವೀಣ್ ದಹಿಯಾ ಮತ್ತು ಲೈಬ್ರೆರಿಯನ್ ಮಧುರಾಣಿ ಎಂದು ಗುರುತಿಸಲಾಗಿದ್ದು ಈಗಾಗಲೇ ಕೆಲಸದಿಂದ ತೆಗೆದುಹಾಕಲಾಗಿದೆ.