ಭದ್ರಾಚಲಂ (ತೆಲಂಗಾಣ): ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಭದ್ರಾಚಲಂನಲ್ಲಿ ಆರಂತಸ್ತಿನ ಕಟ್ಟಡ ಕುಸಿದು ಹಲವರು ಮೃತಪಟ್ಟಿರುವ ಘಟನೆ ನಡೆದಿದೆ. ಟ್ರಸ್ಟ್ವೊಂದರ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ಹಳೆಯ ಕಟ್ಟಡದ ಮೇಲೆ ಐದು ಅಂತಸ್ತಿನ ಮಹಡಿಗಳನ್ನು ನಿರ್ಮಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ನಿರ್ಮಾಣದಲ್ಲಿನ ದೋಷಗಳಿಂದಲೇ ಕಟ್ಟಡ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಸಿದ ಕಟ್ಟಡದ ಪಕ್ಕದಲ್ಲೇ ದೇವಾಲಯವನ್ನೂ ಸಹ ನಿರ್ಮಿಸಲಾಗುತ್ತಿದೆ.
ಪೊಲೀಸ್, ಕಂದಾಯ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ. ಕಟ್ಟಡದ ಅವಶೇಷಗಳನ್ನು ತೆರವು ಮಾಡಲು ಐಟಿಸಿಯಿಂದ ಕ್ರೇನ್‌ಗಳು ಮತ್ತು ಜೆಸಿಬಿಗಳನ್ನು ಘಟನಾ ಸ್ಥಳಕ್ಕೆ ಕರೆಸಲಾಗಿದೆ. ಕಟ್ಟಡದ ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ ನಂತರವಷ್ಟೇ ಎಷ್ಟು ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂಬುದು ತಿಳಿಯಲಿದೆ.
ನಿಯಮಗಳನ್ನು ಉಲ್ಲಂಘಿಸಿ ಕಳಪೆ ಗುಣಮಟ್ಟದ ಬಹುಮಹಡಿ ಕಟ್ಟಡ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ ಎಂಬ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಈ ಹಿಂದೆಯೇ ದೂರುಗಳು ಬಂದಿದ್ದವು. ಕೆಲವು ತಿಂಗಳುಗಳ ಕಾಲ ಕೆಲಸ ಸ್ಥಗಿತಗೊಂಡಿತ್ತು. ನಂತರ ಮತ್ತೆ ನಿರ್ಮಾಣ ಕೆಲಸ ಆರಂಭವಾಗಿತ್ತು. ಈ ವಿಷಯದ ಬಗ್ಗೆ ವಿವಿಧ ಸಂಘಟನೆಗಳು ಮತ್ತು ಸ್ಥಳೀಯರು ಹಲವಾರು ಬಾರಿ ಕಳವಳ ವ್ಯಕ್ತಪಡಿಸಿದ್ದರು.