newsics.com
ಬೆಂಗಳೂರು: ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕಮಾಂಡೊ ಆಸ್ಪತ್ರೆಯ ವಿಸ್ತರಣೆ ಉದ್ದೇಶಕ್ಕಾಗಿ 530 ಮರಗಳನ್ನು ಕತ್ತರಿಸಲು ಇದ್ದ ತಡೆಯಾಜ್ಞೆ ತೆರವುಗೊಳಿಸಿರುವ ಹೈಕೋರ್ಟ್, ಮರ ಕತ್ತರಿಸಲು ಅನುಮತಿ ನೀಡಿದೆ.
ಹಾಗೆಯೇ ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಅಂಬೇಡ್ಕರ್ ನಗರ ಮತ್ತು ಮುದ್ದೇನಹಳ್ಳಿ ಮಾರ್ಗದಲ್ಲಿ 1,988 ಮರಗಳನ್ನು ತೆರವುಗೊಳಿಸಲೂ ಕೆ-ರೈಡ್‌ಗೆ (ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ) ಒಪ್ಪಿಗೆ ನೀಡಿದೆ.
‘ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ-1976′ ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ದೇಶಿಸಬೇಕು’ ಎಂದು ಕೋರಿ ದತ್ತಾತ್ರೇಯ ಟಿ.ದೇವರೆ ಹಾಗೂ ‘ಬೆಂಗಳೂರು ಎನ್ವಿರಾನ್ಸೆಂಟ್ ಟ್ರಸ್ಟ್’ 2018ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಮೆಟ್ರೋ ಯೋಜನೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ನಗರದಲ್ಲಿ ಮರ ಕಡಿಯುವುದಕ್ಕೆ ಆಕ್ಷೇಪಿಸಿ ಪರಿಸರವಾದಿ ದತ್ತಾತ್ರೇಯ ಟಿ.ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಮರ ತಜ್ಞರ ಸಮಿತಿ (ಟಿಇಸಿ) ಶಿಫಾರಸಿನ ಮೇರೆಗೆ ಕಮಾಂಡ್ ಆಸ್ಪತ್ರೆಗಾಗಿ 530 ಮರಗಳು ಮತ್ತು ಬೆಂಗಳೂರು ಉಪನಗರ ರೈಲು ಯೋಜನೆಗಾಗಿ ಅಂಬೇಡ್ಕರ್ ನಗರದಿಂದ ಮುದ್ದನಹಳ್ಳಿಯವರೆಗಿನ ಮಾರ್ಗದಲ್ಲಿ 1988 ಮರಗಳ ಕಡಿಯಲು ಹಾಗೂ 289 ಮರಗಳನ್ನು ಸ್ಥಳಾಂತರ ಮಾಡಲು ನ್ಯಾಯಪೀಠ ಒಪ್ಪಿಗೆ ನೀಡಿದೆ. ಅಲ್ಲದೆ, ಕೆ-ರೈಡ್ ಕಡೆಯಿಂದ 580 ಮರಗಳನ್ನು ಅನುಮತಿ ಇಲ್ಲದೆ ಕತ್ತರಿಸಿರುವ ಹಿನ್ನೆಲೆಯಲ್ಲಿ ಪರಿಹಾರವಾಗಿ 5000 ಗಿಡ ನೆಡಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.ರೈಲು ಯೋಜನೆ, ಆಸ್ಪತ್ರೆಯ ವಿಸ್ತರಣೆಗೆ ಬೆಂಗಳೂರು ನಗರದಲ್ಲಿ 2518 ಮರ ಕತ್ತರಿಸಲು ಅನುಮತಿ ನೀಡಿ ಹೈಕೋರ್ಟ್ ಆದೇಶ