newsics.com
ಚಿಕ್ಕಮಗಳೂರು: ಆಸ್ಪತ್ರೆಯ ಶವಾಗಾರದಲ್ಲಿ ಅಪ್ಪನ ಶವ. ಮದುವೆ ಮಂಟಪದಲ್ಲಿ ಮಗಳ ವಿವಾಹೋತ್ಸವ. ಈ ದೃಶ್ಯವನ್ನು ಊಹಿಸಿಕೊಳ್ಳೋದು ಬಹಳ ಕಷ್ಟ. ಅಪ್ಪ ಸಾವನ್ನಪ್ಪಿದ ವಿಷಯ ತಿಳಿಯದೆ ಈ ಮಗಳು ಮದುವೆಯಾಗಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ಇಂದು ಚಂದ್ರು ಮಗಳು ದೀಕ್ಷಿತಾಳ ಮದುವೆ ನಿಶ್ಚಯವಾಗಿತ್ತು. ನಿನ್ನೆ ಬೆಳಗ್ಗೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಚಂದ್ರು ವಾಪಸ್ ಬರುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ
ಮದುವೆಯಾದ ಮಗಳ ಹೆಸರು ದೀಕ್ಷಿತ. ತಂದೆಯ ಹೆಸರು ಚಂದ್ರು. ಈ ಚಂದ್ರು ತನ್ನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡೋ ತಯಾರಿಯಲ್ಲಿದ್ದರು. ಮಗಳ ಮದುವೆ ಲಗ್ನಪತ್ರಿಕೆ ಕೊಡಲು ಹೋಗಿದ್ದಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಚಂದ್ರು ಸಂಬಂಧಿಕರು ಮಗಳಿಗೆ-ಪತ್ನಿಗೆ ಅಪಘಾತದ ವಿಷಯ ತಿಳಿಸದೆ ಮದುವೆ ಮಾಡಿದ್ದಾರೆ.
ಮದುವೆ ಮುಗಿದ ಬಳಿಕ ಪತ್ನಿಗೆ-ಮಗಳಿಗೆ ಕುಟುಂಬಸ್ಥರು ಈ ದುರಂತದ ವಿಷಯ ಮುಟ್ಟಿಸಿದ್ದಾರೆ. ಮದುವೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಪತ್ನಿ-ಮಗಳ ಆಕ್ರಂದನ ಮುಗಿಲು ಮುಟ್ಟಿದೆ.