newsics.com
ಬೆಂಗಳೂರು : ನಿನ್ನೆ ಬೆಂಗಳೂರಿನ ಸದಾಶಿವನಗರದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆಯನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗಿದೆ.
ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಪಾರ್ಥಿವ ಶರೀರವನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಗೆ ತರಲಾಗಿತ್ತು.
ಈ ವೇಳೆ ಸೋಮನಹಳ್ಳಿ ಗ್ರಾಮಸ್ಥರು ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಎಸ್.ಎಂ ಕೃಷ್ಣ ಪಾರ್ಥಿವ ಶರೀರದ ಅಂತಿಮ ವಿಧಿ ವಿಧಾನ ಕಾರ್ಯದ ಬಳಿಕ ಹಿಂದೂ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ.
ರಾಷ್ಟ್ರಗೀತಿ ನುಡಿಸಿ 3 ಬಾರಿ ಕುಶಾಲತೋಪು ಹಾರಿಸಿ ಎಸ್.ಎಂ.ಕೃಷ್ಣಗೆ ಸರ್ಕಾರಿ ಗೌರವ ಸಮರ್ಪಣೆ ಮಾಡಲಾಗಿದೆ. ವಿವಿಧ ಮಠದ ಸ್ವಾಮೀಜಿಗಳು ಅಂತಿಮ ದರ್ಶನ ಪಡೆದಿದ್ದು, ಅಂತ್ಯಕ್ರಿಯೆ 15 ಜನ ಸ್ವಾಮೀಜಿಗಳು ವೇದ-ಮಂತ್ರಗಳ ಪಠಣ ಮಾಡಿದ್ದಾರೆ. ಸನಾತನ ಹಿಂದೂ ಧರ್ಮದ ವಿಧಿ ವಿಧಾನ ಮುಗಿದ ಬಳಿಕ ಒಕ್ಕಲಿಗ ಸಂಪ್ರದಾಯದಂತೆ ತಾತನ ಚಿತೆಗೆ ಪ್ರೀತಿಯ ಮೊಮ್ಮಗ ಅಮರ್ತ್ಯ ಅಗ್ನಿ ಸ್ಪರ್ಶ ನೀಡಿದ್ದಾರೆ.
ಅಂತ್ಯಕ್ರಿಯೆಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗಿಯಾಗಿದ್ದಾರೆ.