newsics.com
ಹೊಸದೊಂದು ಬಿಗ್ ಬಜೆಟ್ ಸಿನಿಮಾ ದೊಡ್ಡ ಮಟ್ಟದಲ್ಲಿ ಡಿಸೆಂಬರ್ 5ರಂದು ಬಿಡುಗಡೆ ಆಗುತ್ತಿದೆ. ಅಲ್ಲದೇ, ಈ ಸಿನಿಮಾ ಬೇಡಿಕೆ ಹೆಚ್ಚಿರುವ ಕಾರಣದಿಂದ ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ನಸುಕಿನ 3 ಗಂಟೆಗೆ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಅಂಥಹ ಚಿತ್ರಮಂದಿರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ.
ಹೌದು,ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆಯ ನಿಮಯ 41ರ ಪ್ರಕಾರ, ಬೆಳಗ್ಗೆ 6.30ಕ್ಕೂ ಮೊದಲು ಯಾವುದೇ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡುವಂತಿಲ್ಲ. ಅಲ್ಲದೇ, ರಾತ್ರಿ 10.30ರ ನಂತರ ಯಾವುದೇ ಸಿನಿಮಾ ಪ್ರದರ್ಶನ ಆರಂಭ ಆಗುವಂತಿಲ್ಲ. ಈ ನಿಯಮವನ್ನು ಉಲ್ಲಂಘನೆ ಮಾಡುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಕೊಳ್ಳಲಾಗುತ್ತಿದೆ.
ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಸಮಯ ಪಾಲನೆ ಮಾಡದೇ ಅನಧಿಕೃತವಾಗಿ ಚಲನಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಬುಕ್ ಮೈ ಶೋ ಮೂಲಕ ಬೆಳಗಿನಜಾವ 6.30ಕ್ಕೂ ಮುನ್ನ ಸಿನಿಮಾ ಪ್ರದರ್ಶನಕ್ಕೆ ಟಿಕೆಟ್ ಮಾರಾಟ ಆಗುತ್ತಿರುವುದನ್ನು ಗಮನಿಸಿ ಕಾನೂನು ಕ್ರಮಕ್ಕೆ ಆದೇಶಿಸಲಾಗಿದೆ.