newsics.com
ಬೆಂಗಳೂರು: ಚಂಡಮಾರುತ ಪ್ರಭಾವದ ಮಳೆ ಹಾಗೂ ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ತಾಪಮಾನ ತೀವ್ರವಾಗಿ ಕುಸಿಯುತ್ತಿದೆ..ಇದರಿಂದ ವೈರಲ್ ಜ್ವರ, ಫ್ಲೂ ಸೋಂಕು ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಜ್ವರ, ಉಸಿರಾಟದ ಸೋಂಕುಗಳು ಮತ್ತು ಇನ್ಫ್ಲುಯೆಂಜಾ ಚಿಕಿತ್ಸೆಗೆ ಬರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಫ್ಲೂ ಪ್ರಕರಣಗಳು ಮತ್ತು ಇತರ ವೈರಲ್ ಉಸಿರಾಟದ ಸೋಂಕುಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗಳ ಮೆಡಿಸಿನ್ ಸಲಹೆಗಾರ ಡಾ. ಶೀತಲ್ ಚೌರಾಸಿಯಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲೂ ವೈರಲ್ ಸೋಂಕು, ಉಸಿರಾಟದ ಸೋಂಕು ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಅನೇಕ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗಗಳು ಪ್ರತಿ ದಿನ ರಷ್ ಆಗಿರುತ್ತವೆ. ಸಾಂಕ್ರಾಮಿಕ ತಡೆಯುವ ನಿಟ್ಟಿನಲ್ಲಿ ಕೋವಿಡ್ ಸಂದರ್ಭದಲ್ಲಿ ಪಾಲಿಸುತ್ತಿದ್ದ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ವೈರಲ್ ಸೋಂಕು ಪ್ರಕರಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಆಸ್ತಮಾ ಅಥವಾ ಅಲರ್ಜಿ ಹೊಂದಿರುವ ವ್ಯಕ್ತಿಗಳಲ್ಲಿ ರೋಗಲಕ್ಷಣಗಳು ತೀವ್ರವಾಗಿರಲಿವೆ. ಹೀಗಾಗಿ ಇಂಥ ಸಮಸ್ಯೆ ಇರುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞ ವೈದ್ಯರು ಹೇಳಿದ್ದಾರೆ.
ಚಳಿಗಾಲದಲ್ಲಿ ವಿಶೇಷವಾಗಿ ಮಕ್ಕಳು ಹೆಚ್ಚು ದುರ್ಬಲರಾಗಿರುತ್ತಾರೆ. ಹೀಗಾಗಿ ಅವರಿಗೆ ಸೋಂಕುಗಳು ತಗಲುವ ಸಾಧ್ಯತೆ ಹೆಚ್ಚು ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಸಲಹೆಗಾರ್ತಿ (ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್) ಡಾ. ಪರಿಮಳಾ ವಿ. ತಿರುಮಲೇಶ್ ಹೇಳಿದ್ದಾರೆ. ಶೀತ, ಶುಷ್ಕ ಗಾಳಿ ಮತ್ತು ಹೆಚ್ಚಿದ ಒಳಾಂಗಣ ಚಟುವಟಿಕೆಗಳು ಇನ್ಫ್ಲುಯೆಂಜಾ ಮತ್ತು ಇತರ ಉಸಿರಾಟದ ಸೋಂಕುಗಳು ಹರಡಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತವೆ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ಹೆಚ್ಚಿನ ಅಪಾಯವಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಉಸಿರಾಟ ಸಂಬಂಧಿತ ಸೋಂಕು ಪ್ರಕರಣಗಳಲ್ಲಿ ಶೇ.20 ರಷ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ. ಆಸ್ಪತ್ರೆಗೆ ಬರುವವರಲ್ಲಿ ಶೇ.70ಕ್ಕಿಂತ ಹೆಚ್ಚು ಪ್ರಕರಣಗಳು ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿವೆ ಎಂದು ಡಾ.ಪರಿಮಳಾ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಏನೇನು?
ಶುಚಿತ್ವ ಕಾಪಾಡಿ ಮತ್ತು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ತೆಗೆದುಕೊಂಡ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ.
ಕಿಕ್ಕಿರಿದ ಜನಸಂದಣಿ ಇರುವ ಅಥವಾ ಕಳಪೆ ಗಾಳಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ.
ಆಗಾಗ ಬಿಸಿ ನೀರು ಕುಡಿಯುತ್ತಿರಿ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಿ.
ಸಮಯೋಚಿತ ವೈದ್ಯಕೀಯ ಆರೈಕೆಯನ್ನು ಪಡೆಯಿರಿ ಮತ್ತು ರೋಗಲಕ್ಷಣಗಳು ಉಲ್ಬಣಗೊಂಡರೆ ಅಥವಾ ಮುಂದುವರಿದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ.
ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಅನಾರೋಗ್ಯದ ಸಂದರ್ಭದಲ್ಲಿ ಜನಸಂದಣಿಯಲ್ಲಿ ಬೆರೆಯದಿರಿ. ಸೋಂಕು ತಗುಲಿದಲ್ಲಿ ಔಷಧ, ಚಿಕಿತ್ಸೆ ಜತೆಗೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ಅತಿಯಾದ ಕೆಲಸವನ್ನು ತಪ್ಪಿಸುವುದು ಒಳ್ಳೆಯದು.
Relationship Tips ಪ್ರತಿದಿನ ಬೆಳಗ್ಗೆ ಹೀಗೆ ಮಾಡಿದರೆ ಪತಿ- ಪತ್ನಿಯರ ನಡುವೆ ಜಗಳ ಆಗುವುದಿಲ್ಲ