newsics.com
ಭಟ್ಕಳ: ನಟ ಡಾಲಿ ಧನಂಜಯ್ ತಾಲ್ಲೂಕಿನ ಮುರ್ಡೇಶ್ವರ ಸಮೀಪದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಿ ಖುಷಿಪಟ್ಟಿದ್ದಾರೆ.
ಮುರ್ಡೇಶ್ವರದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ವಿಶ್ವ ಮೀನುಗಾರಿಕೆ ದಿನಾಚರಣೆಯ ಕೊನೆಯ ದಿನದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪಾಲ್ಗೊಂಡಿದ್ದ ಡಾಲಿ ಜಗತ್ ಪ್ರಸಿದ್ಧವಾಗಿರುವ ರಾಜ್ಯದ ಏಕೈಕ ಸ್ಕೂಬಾ ತಾಣದ ಸೌಂದರ್ಯ ಆಸ್ವಾದಿಸಿದರು.
ಮುರ್ಡೇಶ್ವರ ಕಡಲತೀರದಿಂದ ಇಲ್ಲಿನ ಅಕ್ವಾ ರೈಡ್ ಕಂಪೆನಿಯ ಬೋಟ್ ಮೂಲಕ ತಮ್ಮ ಸ್ನೇಹಿತರೊಂದಿಗೆ ನಟ ಡಾಲಿ ಅರಬ್ಬೀ ಸಮುದ್ರದಲ್ಲಿ ತೆರಳಿದ್ದು, ಸುಂದರ ವಾತಾವರಣ ಕಂಡು ಖುಷಿಪಟ್ಟರು. ಬಳಿಕ ನೇತ್ರಾಣಿ ದ್ವೀಪದ ಸಮೀಪದ ಆಳ ಸಮುದ್ರದಲ್ಲಿ ಸ್ಕೂಬಾ ಡೈವ್ ಮಾಡಿದ್ದು, ಅಪರೂಪದ ಮೀನುಗಳು, ಹವಳದ ಬಂಡೆ ಸೇರಿದಂತೆ ಆಳಸಮುದ್ರದ ವಿಹಂಗಮ ಜೀವವೈವಿಧ್ಯ ಪರಿಸರವನ್ನು ಕಣ್ತುಂಬಿಕೊಂಡರು.
ಅವರು ಸುಮಾರು 45 ನಿಮಿಷಗಳ ಕಾಲ ನೀರಿನಾಳದಲ್ಲಿ ಕಾಲ ಕಳೆದಿದ್ದು, ಇನ್ನೂ ಒಂದು ತಾಸುಗಳ ಕಾಲ ನೀರಿನಲ್ಲಿ ಕಳೆಯುವ ಇಂಗಿತ ವ್ಯಕ್ತಪಡಿಸಿದರು. ಸ್ಕೂಬಾ ಮಾಡಿಸುತ್ತಿರುವ ಅಕ್ವಾ ರೈಡ್ ಕಂಪನಿಯ ಮುಖ್ಯಸ್ಥರಿಗೆ, ಸಿಬ್ಬಂದಿಗೆ ಡಾಲಿ ಧನ್ಯವಾದ ಸಲ್ಲಿಸಿದರು.
