newsics.com
ಬೆಂಗಳೂರು: ರಾಜ್ಯ ಸರ್ಕಾರದ ವರ್ಗಾವಣೆ ನೀತಿಯಿಂದ ಬೇಸತ್ತ ರಾಜ್ಯದ ಯುವ ಐಎಫ್ಎಸ್ ದಂಪತಿ ಕೇಂದ್ರ ಸೇವೆಗೆ ತೆರಳಲು ಸಿದ್ಧವಾಗಿದೆ.
2011ನೇ ಸಾಲಿನ ಐಎಫ್‌ಎಸ್ ಅಧಿಕಾರಿ ಚಿಕ್ಕಬಳ್ಳಾಪುರ ಮೂಲದ ಡಿ.ಮಹೇಶ್‌ಕುಮಾರ್ ಹಾಗೂ ಅದೇ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ ಗುಜರಾತ್ ಮೂಲದ ದೀಪ್ ಕಂಟ್ರಾಕ್ಟರ್ ಅವರು 13 ವರ್ಷದಿಂದ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ. ಇಬ್ಬರಿಗೂ ಇನ್ನೆರಡು ತಿಂಗಳಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ಸಿಗಲಿದೆ.
ಆದರೆ, ರಾಜ್ಯ ಸರ್ಕಾರದ ವರ್ಗಾವಣೆ ಧೋರಣೆಗೆ ಬೇಸತ್ತು ಸದ್ಯದಲ್ಲೇ ಈ ದಂಪತಿ ಕರ್ನಾಟಕದಿಂದ ನಿರ್ಗಮಿಸಲಿದೆ. ಹಿಮಾಚಲ ಪ್ರದೇಶದ ಮಸ್ಸೂರಿಯಲ್ಲಿರುವ ಲಾಲ್‌ಬಹದ್ದೂರ್ ಶಾಸ್ತ್ರಿ ಅಕಾಡೆಮಿಗೆ ನಿಯೋಜನೆ ಮೇಲೆ ದಂಪತಿ ತೆರಳಲಿದ್ದಾರೆ. ಅದು ಕೇಂದ್ರ ಸೇವೆಗೆ ಆಯ್ಕೆಯಾಗುವ ಅಧಿಕಾರಿಗಳಿಗೆ ತರಬೇತಿ ನೀಡುವ ಸಂಸ್ಥೆಯಾಗಿದ್ದು, ಅಲ್ಲಿ ಈ ದಂಪತಿ ಅಧ್ಯಾಪಕರಾಗಿ ಕೆಲಸ ಮಾಡಲಿದ್ದಾರೆ.
ಸದ್ಯ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ನಿರ್ದೇಶಕರಾಗಿರುವ ಮಹೇಶ್ ಕುಮಾರ್ ಧಾರವಾಡ ಡಿಸಿಎಫ್ ಆಗಿ, ನಂತರ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾಗಿ ಉತ್ತಮವಾಗಿ ಕೆಲಸ ಮಾಡಿ ಹೆಸರು ಪಡೆದವರು.
ಮಹೇಶ್ ಕುಮಾರ್ ಅವರನ್ನು ಪ್ರೀತಿಸಿ ಮದುವೆಯಾದ ನಂತರ ದೀಪ್ ಕಂಟ್ರಾಕ್ಟರ್ ಕರ್ನಾಟಕ ಕೇಡರ್‌ಗೆ ಬಂದವರು. ಧಾರವಾಡ, ಮೈಸೂರುಗಳಲ್ಲಿ ಡಿಸಿಎಫ್ ಆಗಿದ್ದರು. ಬಿಳಿಗಿರಿರಂಗನಬೆಟ್ಟ ಹುಲಿಧಾಮ ನಿರ್ದೇಶಕರಾಗಿದ್ದರು. ಹುಲಿ ಯೋಜನೆ ನಿರ್ದೇಶಕರಾದ ಕರ್ನಾಟಕದ ಮೊದಲ ಮಹಿಳಾ ಐಎಫ್‌ಎಸ್ ಅಧಿಕಾರಿ ಎಂಬುದು ಅವರ ಹಿರಿಮೆ.
ದೀಪ್ ಅವರು ಅಂಟಾರ್ಟಿಕಾ ಯಾತ್ರೆ ಕೈಗೊಂಡು ಬಂದ ಭಾರತದ ಮೊದಲ ಅರಣ್ಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.
ಆಗಸ್ಟ್‌ನಲ್ಲಿ ದೀಪ್ ಅವರಿಗೆ ಯಾವುದೇ ಹುದ್ದೆ ನೀಡದೇ ವರ್ಗ ಮಾಡಲಾಗಿತ್ತು. ಚೆನ್ನಾಗಿ ಕೆಲಸ ಮಾಡಿದರೂ ಹುದ್ದೆ ನೀಡದೇ ವರ್ಗ ಮಾಡಿದ್ದು ಅವರಿಗೆ ಬೇಸರ ತಂದಿತ್ತು. ಇದಾಗಿ ಮೂರು ತಿಂಗಳಾಗುತ್ತಾ ಬಂದಿದ್ದರೂ ಹುದ್ದೆ ನೀಡಿರಲಿಲ್ಲ. ನಂತರ ಬಾಗಲಕೋಟೆ ಡಿಸಿಎಫ್ ಆಗಿ ಹುದ್ದೆ ನೀಡುವ ಪ್ರಸ್ತಾವನೆ ಹೋದರೂ ಆದೇಶವಾಗಿರಲಿಲ್ಲ. ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಿಂದ ಸಂರಕ್ಷಣಾಧಿಕಾರಿ(ಸಿಎಫ್) ಬಡ್ತಿಗೆ ಇನ್ನು ನಾಲ್ಕು ತಿಂಗಳು ಇದೆ. ಬಿಆರ್‌ಟಿಯಲ್ಲೇ ಮುಂದುವರಿಸಲು ಕೋರಿದ್ದರೂ ಹುದ್ದೆ ನೀಡದೇ ವರ್ಗ ಮಾಡಿದ್ದು ಅವರಿಗೆ ಬೇಸರವಾಗಿದೆ ಎನ್ನಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ, ಹಿರಿಯ ಅರಣ್ಯಾಧಿಕಾರಿಗಳಿಗೆ ಕೋರಿಕೆ ಸಲ್ಲಿಸಿದ್ದರೂ ಹುದ್ದೆ ನೀಡಿರಲಿಲ್ಲ.
ಇದರಿಂದ ಬೇಸರಗೊಂಡ ದೀಪ್ ಅವರ ಜತೆಗೆ ಮಹೇಶ್ ಕುಮಾರ್ ಕೂಡ ಕೇಂದ್ರ ಸೇವೆಗೆ ಹೋಗಲು ನಿರ್ಧರಿಸಿ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದ್ದು, ಶೀಘ್ರದಲ್ಲೇ ಕೇಂದ್ರ ಸೇವೆಗೆ ತೆರಳಲಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
https://x.com/mahesh_ifs/status/1746561884105457927?t=9edIE1BHkzOd7w4Cq1aaWQ&s=19
https://x.com/i3masterminds/status/1840357223207432276?t=ItF9DMZTcrUh95EdGohRWg&s=19
ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಕಸಾಪ ಅಧ್ಯಕ್ಷರ ತೀರ್ಮಾನವೇ ಅಂತಿಮವಲ್ಲ: ಸಚಿವ ಚಲುವರಾಯಸ್ವಾಮಿ
ಬಿಗ್ ಬಾಸ್ ಬಿಟ್ರು, ಡ್ಯಾನ್ಸ್ ಶೋನಲ್ಲಿ ಸ್ಟೆಪ್ ಹಾಕಿದ್ರು ಲಾಯರ್! ಕಲರ್ಸ್‌ನಿಂದ ಝೀಗೆ ಜಿಗಿದ ಜಗದೀಶ್!
ಇಂದು ಐಶ್ವರ್ಯಾ ರೈ ಬಚ್ಚನ್ ಬರ್ತ್‌ಡೆ, ಕೊನೆಗೂ ಅವರಿಬ್ಬರು ವಿಶ್ ಮಾಡಲೇ ಇಲ್ಲ! ಒಂಟಿಯಾದ್ರಾ ಅತಿ ಶ್ರೀಮಂತ ನಟಿ?
ಬಿಜಿಎಸ್ ಆಸ್ಪತ್ರೆಗೆ ದಾಖಲಾದ ದರ್ಶನ್: ಬೆನ್ನು ನೋವಿನ ಜೊತೆ ನಟ ದರ್ಶನ್‌ಗೆ ಮತ್ತೊಂದು ಸಮಸ್ಯೆ