newsics.com | ನ್ಯೂಸಿಕ್ಸ್
ನ್ಯೂಯಾರ್ಕ್: ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್-2026ರ ರೋಮಾಂಚಕ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸ್ಪೇನ್ ಐತಿಹಾಸಿಕ ಜಯಭೇರಿ ಬಾರಿಸಿದೆ. ಆದರೆ, ಈ ವಿಶ್ವವಿಜಯದ ಸಂಭ್ರಮದ ನಡುವೆಯೇ ವೇದಿಕೆಯಲ್ಲಿ ನಡೆದ ಘಟನೆಯೊಂದರ ವಿಡಿಯೋ ಇಡೀ ಜಗತ್ತಿನಾದ್ಯಂತ ಸೋಷಿಯಲ್ ಮೀಡಿಯಾಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಸ್ಪೇನ್ ತಂಡದ ನಾಯಕ ರೋಡ್ರಿ ಅವರು ಟ್ರೋಫಿ ಸ್ವೀಕರಿಸುವ ಮುನ್ನ ವೇದಿಕೆಯಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪಕ್ಕಕ್ಕೆ ತಳ್ಳಿದ್ದಾರೆ ಎನ್ನಲಾದ ವಿಡಿಯೋಗಳು ಈಗ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ನಡೆದಿದ್ದೇನು?
ಪಂದ್ಯ ಮುಕ್ತಾಯಗೊಂಡ ನಂತರ ಬಹುಮಾನ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು. ಸ್ಪೇನ್ ನಾಯಕ ರೋಡ್ರಿ ತಮ್ಮ ಸಹ ಆಟಗಾರರೊಂದಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಸಂಭ್ರಮಿಸಲು ಸಜ್ಜಾಗುತ್ತಿದ್ದರು. ಈ ವೇಳೆ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ವೇದಿಕೆಯ ಮಧ್ಯಭಾಗದಲ್ಲೇ ನಿಂತಿದ್ದರು.
ವೈರಲ್ ಆಗಿರುವ ವೀಡಿಯೊ ದೃಶ್ಯಾವಳಿಗಳ ಪ್ರಕಾರ, ರೋಡ್ರಿ ಅವರು ಟ್ರಂಪ್ ಕಡೆಗೆ ಕೈ ಸನ್ನೆ ಮಾಡುತ್ತಾ ಏನನ್ನೋ ಮಾತನಾಡಿದ್ದಾರೆ. ಟ್ರೋಫಿ ಎತ್ತಲು ಜಾಗ ಸಾಲದ ಕಾರಣ, ಸ್ಪೇನ್ ತಾರೆ ಅಮೆರಿಕ ಅಧ್ಯಕ್ಷರನ್ನು ಪಕ್ಕಕ್ಕೆ ಸರಿಯುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಮುನ್ನವೇ ಎಚ್ಚೆತ್ತ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ತಕ್ಷಣ ಮಧ್ಯಪ್ರವೇಶಿಸಿದರು. ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವೇದಿಕೆಯ ಮಧ್ಯಭಾಗದಿಂದ ಸೂಕ್ಷ್ಮವಾಗಿ ಪಕ್ಕಕ್ಕೆ ಕರೆದೊಯ್ದರು. ಆ ಬಳಿಕವಷ್ಟೇ ರೋಡ್ರಿ ಮತ್ತು ಅವರ ತಂಡದ ಆಟಗಾರರಿಗೆ ಮುಕ್ತವಾಗಿ ಸಂಭ್ರಮಿಸಲು ವೇದಿಕೆಯಲ್ಲಿ ಸ್ಥಳಾವಕಾಶ ಸಿಕ್ಕಿತು.
Trump somehow always ending up in every trophy lift is killing me😂pic.twitter.com/OVnC3EnJdV https://t.co/WjlRyJpWbv
— AB⚕ (@AbsoluteBruno) July 19, 2026
ಈ ಸಂಕ್ಷಿಪ್ತ ಹಾಗೂ ಮುಜುಗರದ ಕ್ಷಣದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಪರೀತ ಟ್ರೋಲ್ ಹಾಗೂ ಚರ್ಚೆಗಳು ನಡೆಯುತ್ತಿದ್ದರೂ, ಸ್ಪೇನ್ ನಾಯಕ ರೋಡ್ರಿ ಆಗಲಿ ಅಥವಾ ಅವರ ಮ್ಯಾನೇಜ್‌ಮೆಂಟ್ ಆಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಏನೇ ಆದರೂ, ಈ ಸಣ್ಣ ಅಡಚಣೆಯನ್ನು ಮರೆತು ಸ್ಪೇನ್ ಆಟಗಾರರು ವಿಶ್ವಕಪ್ ಟ್ರೋಫಿಯನ್ನು ಮುದ್ದಾಡಿ, ತಮ್ಮ ಐತಿಹಾಸಿಕ ಗೆಲುವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸದ್ಯಕ್ಕಂತೂ ಫುಟ್‌ಬಾಲ್ ಇತಿಹಾಸದ ಈ ದೊಡ್ಡ ಗೆಲುವಿನ ಜೊತೆಗೆ, ಟ್ರಂಪ್ ಮತ್ತು ರೋಡ್ರಿ ನಡುವಿನ ಈ ವಿಚಿತ್ರ ವಿನಿಮಯ ಕೂಡ ಕ್ರೀಡಾ ಲೋಕದಲ್ಲಿ ಭಾರಿ ಸದ್ದು ಮಾಡುತ್ತಿದೆ.