newsics.com
ಜೀವನದಲ್ಲಿ ಪ್ರತಿಯೊಬ್ಬರು ಒಮ್ಮೆಯಾದರೂ ಪ್ರೀತಿಯಲ್ಲಿ ಬಿದ್ದಿರುತ್ತಾರೆ.
ಹೌದು, ಪ್ರೀತಿಯಲ್ಲಿರುವ ವ್ಯಕ್ತಿಗಳಲ್ಲಿ ಕೆಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಉಂಟಾಗುತ್ತವೆ ಎಂದು ಸಂಶೋಧನೆ ಹೇಳಿದೆ.
ಒಬ್ಬ ವ್ಯಕ್ತಿ ಪ್ರೀತಿಯಲ್ಲಿ ಬಿದ್ದಾಗ ಆತ ತನ್ನ ನಿದ್ರೆ, ಬಾಯಾರಿಕೆ ಮತ್ತು ಹಸಿವನ್ನು ಕಳೆದುಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಆತ ಎಲ್ಲವನ್ನೂ ಮರೆತು ಪ್ರೀತಿಸುತ್ತಿರುವ ವ್ಯಕ್ತಿಯ ಬಗ್ಗೆ ಮಾತ್ರ ಯೋಚಿಸಲು ಪ್ರಾರಂಭಿಸುತ್ತಾನೆ. ದೊಡ್ಡವರು ಇದನ್ನು ವಯಸ್ಸು ಅಥವಾ ಹುಚ್ಚುತನದ ಪರಿಣಾಮಗಳು ಎಂದು ಕರೆಯುತ್ತಾರೆ. ಆದರೆ ಇದರ ಹಿಂದೆ ಕೆಲವು ಕಾರಣಗಳಿವೆ.
ಬಿಹೇವಿಯರಲ್ ಸ್ಲೀಪ್ ಮೆಡಿಸಿನ್‌ನಲ್ಲಿನ ಸಂಶೋಧನೆಯ ಪ್ರಕಾರ, ಪ್ರೀತಿಯಲ್ಲಿ ಬಿದ್ದವರ ಮೇಲೆ ಬೀರುವ ನಿದ್ರೆಯ ಪರಿಣಾಮವು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಹುಡುಗರಿಗಿಂತ ಪ್ರೀತಿಯಲ್ಲಿ ಬೀಳುವ ಹುಡುಗಿಯರ ಮೇಲೆ ಈ ಪರಿಣಾಮವು ಹೆಚ್ಚು ಗೋಚರಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಈ ಪರಿಣಾಮವು ದ್ವಿಗುಣವಾಗಬಹುದು. ಅಂದರೆ ಬ್ರೇಕ್ಅಪ್ ನಂತರ, ಹುಡುಗ ಆರಾಮವಾಗಿ ಮಲಗಿದ್ದರೆ, ಹುಡುಗಿ ನಿದ್ರೆ ಇಲ್ಲದೇ ರಾತ್ರಿಪೂರ್ತಿ ಎಚ್ಚರದಿಂದಲೇ ಕಾಲ ಕಳೆಯುತ್ತಾಳೆ. ಭಾವನಾತ್ಮಕ ಮತ್ತು ಹಾರ್ಮೋನುಗಳ ಅಸಮತೋಲನದಿಂದಾಗಿ ಈ ಪರಿಣಾಮವು ಹುಡುಗಿಯರಲ್ಲಿ ಕಂಡುಬರುತ್ತದೆ.
ದೇಹದ ಮೇಲೆ ಪ್ರೀತಿಯ ಪರಿಣಾಮವು ಆಲ್ಕೋಹಾಲ್ ಅಥವಾ ಡ್ರಗ್ನಂತೆಯೇ ಇರುತ್ತದೆ. ಕೆಲವೊಮ್ಮೆ ಪ್ರೀತಿ ಮದ್ಯ ಮತ್ತು ಮಾದಕ ದ್ರವ್ಯಗಳಿಗಿಂತ ಹೆಚ್ಚು ಅಮಲೇರಿಸುತ್ತದೆ. ಇದು ಚಟವೂ ಆಗಿರಬಹುದು.
ಒಬ್ಬ ವ್ಯಕ್ತಿಯು ಪ್ರೀತಿಯಲ್ಲಿ ಬಿದ್ದಾಗ, ಮೆದುಳಿನಲ್ಲಿ ಡೋಪಮೈನ್ ಮತ್ತು ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಇದು ದೇಹ ಮತ್ತು ಮನಸ್ಸನ್ನು ಸಂತೋಷಪಡಿಸುತ್ತದೆ. ಈ ಆನಂದವನ್ನು ಹೆಚ್ಚಾಗಿ ಪಡೆಯಲು, ವ್ಯಕ್ತಿಯು ಗೆಳೆಯ ಅಥವಾ ಗೆಳತಿಯೊಂದಿಗೆ ಹತ್ತಿರವಾಗುವುದು, ಅವನನ್ನು ಅಥವಾ ಅವಳನ್ನು ಆಗಾಗ್ಗೆ ನೆನಪಿಸಿಕೊಳ್ಳುವುದು ಮತ್ತು ಫೋನ್ನಲ್ಲಿ ಮಾತನಾಡುವುದು ಮುಂತಾದ ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾನೆ. ಹಾಗಾಗಿ ಕ್ರಮೇಣ ಇದು ಚಟವಾಗುತ್ತದೆ. ಪ್ರೀತಿಯ ಈ ಅಮಲಿನಲ್ಲಿ ದೇಹವು ಹೆಚ್ಚುವರಿ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಹೈಪರ್ಆ್ಯಕ್ಟಿವಿಟಿಗೆ ಕಾರಣವಾಗುತ್ತದೆ.
ಪ್ರೀತಿ ಹೊಸದಾಗಿದ್ದರೆ, ಅದು ನಿಮ್ಮನ್ನು ರಾತ್ರಿಯಿಡೀ ಎಚ್ಚರವಾಗಿರಿಸುತ್ತದೆ. ಆದರೆ ಪ್ರೀತಿ ಹಳೆಯದಾಗಿದ್ದರೆ, ಶಾಶ್ವತ ಮತ್ತು ಬಲವಾಗಿರುತ್ತದೆ. ಇದು ನಿದ್ರೆ ಮಾತ್ರೆಯಂತೆ ಕೆಲಸ ಮಾಡುತ್ತದೆ.