newsics.com
ಲೆಬನಾನ್: ಪೇಜರ್‌ಗಳ ಸರಣಿ ಸ್ಫೋಟದಲ್ಲಿ ಡಜನ್ಗಟ್ಟಲೇ ಜೀವವನ್ನು ತೆಗೆದುಕೊಂಡು 3 ಸಾವಿರಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ.
ಪೇಜರ್ ಸ್ಫೋಟದ ಹಿಂದಿನ ಶಕ್ತಿ ಇಸ್ರೇಲ್ ಎಂಬುದು ಈಗ ಜಗಜ್ಜಾಹೀರಾಗಿದೆ. ಅದರ ಹಿಂದೆ ಅನೇಕ ಶಕ್ತಿಗಳು ಕೆಲಸ ಮಾಡಿವೆ. ಇಸ್ರೇಲ್ ಅಂದರೇನೇ ಹಾಗೆ. ಎದುರಾಳಿ ಎಂದೂ ಯೋಚಿಸದ, ಕಲ್ಪನೆಯನ್ನೂ ಮಾಡದ ಮಾರ್ಗದ ಮೂಲಕ ಅವರದೇ ನೆಲಕ್ಕೆ ಹೊಕ್ಕು ಅವರನ್ನೇ ಹೊಡೆದುರುಳಿಸುವ ಛಾತಿಯನ್ನು ರೂಢಿಸಿಕೊಂಡು ಬಂದಿದೆ.
ಹಮಾಸ್ ಮುಖ್ಯಸ್ಥನ ಸಾವು, ಹಿಜ್ಬುಲ್ಲಾ ಸಂಘಟನೆಯ ಒಂದೊಂದೇ ಕಮಾಂಡರ್ಗಳು ಇಸ್ರೇಲ್ ದಾಳಿಗೆ ಬಲಿಯಾಗುತ್ತಿರುವುದು. ಪೇಜರ್ ಬ್ಲಾಸ್ಟ್, ವಾಕಿಟಾಕಿ ಬ್ಲಾಸ್ಟ್ ಇವೆಲ್ಲವೂ ಇಸ್ರೇಲ್ ಯಾರೂ ಎಂದೂ ಕಲ್ಪಿಸದ ಹಾದಿಯಲ್ಲೇ ನಡೆದ ಘಟನೆಗಳು.
ಈಗ ಪೇಜರ್ ಬ್ಲಾಸ್ಟ್ ಒಂದು ಜಾಗತಿಕ ಸುದ್ದಿ. ಲೆಬನಾನ್‌ನಲ್ಲಿ ಮೊಬೈಲ್ ಬಳಕೆ ಮಾಡುವ ಬದಲು ಪೇಜರ್ ಇಟ್ಟುಕೊಂಡು ಇಸ್ರೇಲ್ ವಿರುದ್ಧ ಸಂಚು ಹೂಡಲು ಸಜ್ಜಾಗಿದ್ದರು ಎಂಬ ಮಾಹಿತಿ ತಿಳಿದ ಇಸ್ರೇಲ್ ಪೇಜರ್ಗಳನ್ನೇ ಬ್ಲಾಸ್ಟ್ ಮಾಡಿ ಬಿಸಾಕಿತ್ತು. ಈಗ ಅದರ ಹಿಂದೆ ಭಾರತೀಯ ಟೆಕ್ಕಿಯೂ ಕೆಲಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕೇರಳದ ವಯನಾಡಿನ ರಿನಸನ್ ಜೋಸ್ ಪೇಜರ್ ಹಾಗೂ ವಾಕಿಟಾಕಿ ಸ್ಫೋಟದ ಹಿಂದೆ ಇದ್ದ ವ್ಯಕ್ತಿ ಎಂಬುದು ದೃಢವಾಗಿದೆ.
ಕೇರಳದ ವಯನಾಡು ಜಿಲ್ಲೆಯ ಒಮದಾಯನಗಾಡಿ ಗ್ರಾಮದ ರಿನಸನ್ ಜೋಸ್ ಈಗ ನಾರ್ವೆಯ ನಾಗರಿಕ.
ನೋರ್ಟಾ ಗ್ಲೋಬಲ್ ಎಂಬ ಕಂಪನಿಯ ಮಾಲೀಕನಾಗಿರುವ ರಿನಸನ್ ಜೋಸ್, ನೋರ್ಟಾ ಗ್ಲೋಬಲ್ ಕಂಪನಿಯೇ ಲೆಬನಾನ್ ಹಿಜ್ಬುಲ್ಲಾ ಉಗ್ರರಿಗೆ ಪೇಜರ್ ಪೂರೈಸಿತ್ತು. ಆದರೆ ನೇರವಾಗಿ ನೋರ್ಟಾ ಕಂಪನಿ ಪೂರೈಸಿರಲಿಲ್ಲ. ಹಂಗೇರಿ ದೇಶದ ಬಿಎಸಿ ಕನ್ಸಲ್ಟಿಂಗ್ ಕಂಪನಿಯ ಮೂಲಕ ನೋರ್ಟಾ ಗ್ಲೋಬಲ್ ಪೇಜರ್ ಪೂರೈಸಿದೆ.
ನೋರ್ಟಾ ಗ್ಲೋಬಲ್ ಬಲ್ಗೇರಿಯಾ ದೇಶದಲ್ಲಿರುವ ಕಂಪನಿ. ಇದರ ಮಾಲೀಕ ರಿನಸನ್ ಜೋಸ್. ಕಳೆದ ಮೂರು ದಿನಗಳಿಂದ ಕೇರಳದಲ್ಲಿರುವ ತನ್ನ ಪೋಷಕರು ಸಂಬಂಧಿಕರ ಸಂಪರ್ಕಕ್ಕೆ ರಿನಸನ್ ಜೋಸ್ ಸಿಕ್ಕಿಲ್ಲವಂತೆ. ನಾರ್ವೆಗೆ ಉನ್ನತ ಶಿಕ್ಷಣಕ್ಕೆ ಹೋಗುವುದಾಗಿ ರಿನಸನ್ ಜೋಸ್ ಹೇಳಿಕೊಂಡಿದ್ದಾನೆ. ಆದರೆ ತನ್ನದೇ ಆದ ನೋರ್ಟಾ ಗ್ಲೋಬಲ್ ಕಂಪನಿಯನ್ನು ತೆರೆದಿರುವ ರಿನಸನ್ ಜೋಸ್, ಬಿಎಸಿ ಕನ್ಸಲ್ಟಿಂಗ್ ಕಂಪನಿಯ ಮೂಲಕ ತನ್ನ ಪೇಜರ್ಗಳನ್ನು ಹಿಜ್ಬುಲ್ಲಾ ಉಗ್ರರಿಗೆ ರವಾನಿಸಿದ್ದಾನೆ. ಆದರೆ, ಬಲ್ಗೇರಿಯಾದ ಅಧಿಕಾರಿಗಳು ಮಾತ್ರ ಇವು ಬಲ್ಗೇರಿಯಾದಲ್ಲಿ ತಯಾರಾದ ಪೇಜರ್‌ಗಳಲ್ಲ ಎಂದು ಹೇಳುತ್ತಿದ್ದಾರೆ.
ಒಂದು ಕಡೆ ಕೇರಳದ ರಿನಸನ್ ಜೋಸ್‌ನ ಹೆಸರು ಪೇಜರ್ ಬ್ಲಾಸ್ಟ್ ಜತೆ ತಳುಕು ಹಾಕಿಕೊಂಡಿದ್ದರೆ ಮತ್ತೊಂದು ಕಡೆ ಹಂಗೇರಿ ದೇಶದ ಮಹಿಳಾ ಉದ್ಯಮಿಯ ಹೆಸರು ಕೂಡ ಇದರೊಂದಿಗೆ ತಳುಕು ಹಾಕಿಕೊಂಡಿದೆ. ಬಿಎಸಿ ಕಂಪನಿಯ ಮಾಲೀಕಳಾದ ಹಂಗೇರಿ ಮೂಲದ ಕ್ರಿಸ್ಟಿಯಾನಾ ಬಾರ್ಸೋನಿ ಕೂಡ ಈ ಪೇಜರ್ ದಾಳಿಯ ಹಿಂದೆ ಕೈಜೋಡಿಸಿದ್ದು ದೃಢಪಟ್ಟಿದೆ.
ಬಲ್ಗೇರಿಯಾದಿಂದ ನೋರ್ಟಾ ಗ್ಲೋಬಲ್ ಕಂಪನಿಯ ಪೇಜರ್ಗಳು ಕ್ರಸ್ಟಿಯಾನಾ ಬಾರ್ಸೋನಿ ಕಂಪನಿಯಾ ಬಿಎಸಿಗೆ ಬಂದು ಸೇರಿವೆ ಇಲ್ಲಿಂದ ಹಿಜ್ಬುಲ್ಲಾ ಉಗ್ರರಿಗೆ ಪೇಜರ್‌ಗಳು ರವಾನೆಯಾಗಿವೆ.
ಕ್ರಿಸ್ಟಿಯಾನಾ ಬಾರ್ಸೋನಿಯ ಬಿಎಸಿ ಕಂಪನಿ ಪೇಜರ್ ಡಿಸೈನ್ ಮಾಡಲು ತೈವಾನ್ ಪೇಜರ್ ಉತ್ಪಾದನಾ ಕಂಪನಿಯಿಂದ ಲೈಸೆನ್ಸ್ ಪಡೆದಿತ್ತು, ಹೀಗಾಗಿ ಈ ಕಂಪನಿ ರಿನಸನ್ ಜೋಸ್ ಕಂಪನಿಯಿಂದ ಪೇಜರ್ಗಳನ್ನು ಪಡೆದು ಅವುಗಳನ್ನು ಹಿಜ್ಬುಲ್ಲಾ ಉಗ್ರರಿಗೆ ಮಾರಿದೆ.
ಸದ್ಯ ಒಂದು ಕಡೆ ರಿನಸನ್ ಜೋಸ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇತ್ತ ಕ್ರಿಸ್ಟಿಯಾನಾ ಬಾರ್ಸೋನಿಯಾ ಕೂಡ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ನನ್ನ ತಾಯಿಯವರ ಮನೆ ನಿಮ್ಮ ಕಾರಿನಷ್ಟೇ ದೊಡ್ಡದು..! ಒಬಾಮಾ ಬಳಿ ಮೋದಿ ಮನದಾಳದ ಮಾತು