newsics.com
ರಾಮನಗರ/ ಬೆಂಗಳೂರು: ಜಾತಿನಿಂದನೆ ಪ್ರಕರಣದಲ್ಲಿ ಜೈಲು ಸೇರಿದ ಬೆನ್ನಲ್ಲೇ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ತನ್ನ ಮೇಲೆ ಶಾಸಕ ಮುನಿರತ್ನ ಅತ್ಯಾಚಾರವೆಸಗಿ ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದಾರೆ ಎಂದು ಸಮಾಜ ಸೇವಕಿ, ಬಿಜೆಪಿ ಕಾರ್ಯಕರ್ತೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ರಾಜರಾಜೇಶ್ವರಿ ನಗರದ ಸುಮಾರು 40 ವರ್ಷದ ಮಹಿಳೆ ಬುಧವಾರ ದೂರು ನೀಡಿದ್ದಾರೆ. ದೂರು ಆಧರಿಸಿ ಬುಧವಾರ ರಾತ್ರಿ ಮುನಿರತ್ನ, ಆತನ ಗನ್‌ಮ್ಯಾನ್ ವಿಜಯಕುಮಾರ್, ಸುಧಾಕರ, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ ಸೇರಿ 7 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೂರು ನೀಡುವ ಸಲುವಾಗಿ ಮಹಿಳೆ ಬುಧವಾರ ಮಧ್ಯಾಹ್ನ ರಾಮನಗರದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದರು. ಮಹಿಳೆಯನ್ನು ವಿಚಾರಿಸಿ ಮಾಹಿತಿ ಪಡೆದ ಪೊಲೀಸರು, ಕೃತ್ಯ ನಡೆದ ಸ್ಥಳ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿಗೇ ಹೋಗಿ ದೂರು ಕೊಡುವಂತೆ ಸೂಚಿಸಿದ್ದಾರೆ.
ಕಗ್ಗಲಿಪುರ ಠಾಣೆಗೆ ಬಂದ ಮಹಿಳೆ ತನ್ನ ಮೇಲೆ 2020ರಿಂದ 2022ರವರೆಗೆ ಅತ್ಯಾಚಾರ ನಡೆಸಿ, ಹನಿಟ್ರ್ಯಾಪ್‌ಗೆ ಬಳಸಿ
ಕೊಂಡಿರುವ ಕುರಿತು ದೂರು ಕೊಟ್ಟಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ದೂರು ಪರಿಶೀಲಿಸಿದ ಠಾಣೆಯ ಅಧಿಕಾರಿಗಳು ನಂತರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿನ್ನ ನೋಡಿದರೆ ಮೈ ಝುಂ ಎನ್ನತ್ತೆ…
ಕೋವಿಡ್ ವೇಳೆ ನನ್ನ ಸೇವಾ ಕಾರ್ಯ ಗುರುತಿಸಿ ಕರೆಮಾಡಿದ್ದ ಮುನಿರತ್ನ, ‘ನಮಸ್ತೆ ಲೀಡರ್, ನಾನು ನಿಮ್ಮ ಭಾಗದ ಶಾಸಕ. ನಿಮ್ಮ ಬಗ್ಗೆ ಕೇಳಿದ್ದೀನಿ. ನನ್ನನ್ನು ಬಂದು ಭೇಟಿ ಮಾಡಿ’ ಎಂದಿದ್ದ. ಅದರಂತೆ, ಭೇಟಿ ಮಾಡಿದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಆಗಾಗ ವಿಡಿಯೊ ಕಾಲ್ ಮಾಡಿ ಮಾತನಾಡುತ್ತಿದ್ದರು. ನಗ್ನವಾಗಿ ಕರೆ ಮಾಡುವಂತೆ ಒತ್ತಾಯಿಸಿದಾಗ, ನಾನು ನಿರಾಕರಿಸಿದ್ದೆ.
ಒಮ್ಮೆ ಕರೆ ಮಾಡಿ, ನಿಮ್ಮಿಂದ ಒಂದು ಸಹಾಯವಾಗಬೇಕು ಎಂದು ಕೇಳಿ, ಸ್ಥಳವೊಂದಕ್ಕೆ ಬರಲು ಸೂಚಿಸಿದ್ದರು. ಅದರಂತೆ, ನಾನು ಹೋದಾಗ ‘ನಿನ್ನ ನೋಡಿದರೆ ಮೈ ಜುಮ್ ಎನ್ನುತ್ತದೆ’ ಎಂದು ಮಾತನಾಡಿ ತಬ್ಬಿಕೊಳ್ಳಲು ಮುಂದಾದ. ನಾನು ಆಕ್ಷೇಪಿಸಿದಾಗ, ‘ರಾಜಕೀಯಕ್ಕೆ ಬರಬೇಕಾದರೆ ಇವೆಲ್ಲಾ ಕಾಮನ್’ ಎಂದು ಹೇಳಿ ಮುಂದುವರಿದ.
ನಾನು ಕಿರುಚಿಕೊಳ್ಳುತ್ತೇನೆ ಎಂದು ಹೇಳಿದಾಗ, ‘ನಾನು ಶಾಸಕ. ಅಪಾರ ಜನಬೆಂಬಲವಿದೆ. ನಿನ್ನ ವಿರುದ್ಧವೇ ಕಂಪ್ಲೆಂಟ್ ಮಾಡುತ್ತೇನೆ. ಸುಮ್ಮನಿದ್ದರೆ ಸರಿ’ ಎಂದು ಅತ್ಯಾಚಾರ ಎಸಗಿದ್ದಾನೆ.
ಇಲ್ಲಿ ನಡೆದ ವಿಷಯವನ್ನು ಯಾರಿಗೂ ಹೇಳಬೇಡ. ಈ ಕೊಠಡಿಯಲ್ಲಿ ಕ್ಯಾಮೆರಾ ಅಳವಡಿಸಿದ್ದು, ಎಲ್ಲವೂ ರೆಕಾರ್ಡ್ ಆಗಿದೆ. ನಿನ್ನ ವಿಡಿಯೊ ಎಡಿಟ್ ಮಾಡಿ ಹಂಚುತ್ತೇನೆ’ ಎಂದು ಹೆದರಿಸಿದ್ದಾನೆ. ಚಿತ್ರೀಕರಿಸಿ ಟಿ.ವಿ.ಯಲ್ಲಿ ಹಾಕಿ ನನಗೆ ತೋರಿಸಿದ್ದಾನೆ.
ವಿಡಿಯೊ ಇಟ್ಟುಕೊಂಡು ಹಲವು ಬಾರಿ ಅತ್ಯಾಚಾರ ಎಸಗಿದ್ದು, ‘ನಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ನಿನ್ನ ಗಂಡ ಮತ್ತು ಮಕ್ಕಳಿಗೆ ವಿಡಿಯೊ ತೋರಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ನಂತರ, ಆತನಿಗೆ ಪರಿಚಿತವಿರುವ ಮತ್ತೊಬ್ಬ ಮಹಿಳೆ ಜತೆ ಸೇರಿ ಆತ ಹೇಳಿದವರನ್ನು ಹನಿಟ್ರ್ಯಾಪ್ ಮಾಡಿಸಿದ್ದಾನೆ. ಮರ್ಯಾದೆ ಹಾಗೂ ಪ್ರಾಣಕ್ಕೆ ಅಂಜಿ ಆತ ಹೇಳಿದಂತೆ ಕೇಳಿದ್ದೇನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ನೀವು ಮಲಗೋದು ಹೇಗೆ? ನಿಮ್ಮ ನಿದ್ರಾ ಭಂಗಿಯಿಂದಲೇ ಗೊತ್ತಾಗತ್ತೆ ನಿಮ್ಮ ವ್ಯಕ್ತಿತ್ವ!