newsics.com
ಬೆಂಗಳೂರು: ನಾಡಿನ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕದ ಸಂಪಾದಕ ವಸಂತ ನಾಡಿಗೇರ್ ಅವರು ಸೋಮವಾರ ಬೆಳಗಿನ ಜಾವ 3:13ಕ್ಕೆ ನಿಧನರಾದರು.
ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಮೂಲತಃ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನವರಾದ ನಾಡಿಗೇರ್ ಅವರು ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ವಿಶ್ವವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು.
ವಿಜಯ ಕರ್ನಾಟಕದಲ್ಲಿ ಸುದ್ದಿಗಳಿಗೆ ಆಕರ್ಷಕ ಶೀರ್ಷಿಕೆ ಕೊಡುವುದರಲ್ಲಿ ಹಲವು ವಿನೂತನ ಪ್ರಯೋಗ ಕೈಗೊಂಡು, ಕನ್ನಡ ಪತ್ರಿಕೋದ್ಯಮಕ್ಕೇ ಹೊಸ ಆಯಾಮ ನೀಡಿದ್ದರು. ಲತಾ ಮಂಗೇಶಕರ್ ಜೀವನ ಚರಿತ್ರೆ ಕೃತಿಯನ್ನು ಕನ್ನಡದಲ್ಲಿ ರಚಿಸಿದ್ದರು.
ರಸಾಯನ ಶಾಸ್ತ್ರ ಪದವೀಧರರಾಗಿದ್ದ ವಸಂತ ನಾಡಿಗೇರ ಎಂಬತ್ತರ ದಶಕದಲ್ಲಿ ಸಂಯುಕ್ತ ಕರ್ನಾಟದಿಂದ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಕನ್ನಡಪ್ರಭದಲ್ಲಿ ಒಂದೂವರೆ ದಶಕ ಕಾಲ ಕೆಲಸ ಮಾಡಿದ್ದರು. ಬಳಿಕ ವಿಜಯ ಕರ್ನಾಟಕ ಪತ್ರಿಕೆಯ ಆರಂಭದಿಂದಲೂ ಮುಖ್ಯ ಉಪ ಸಂಪಾದಕರಾಗಿ ಸೇರಿ ಅಲ್ಲಿಯೇ ಬಹುಕಾಲ ಸುದ್ದಿ ಸಂಪಾದಕರಾಗಿದ್ದರು. ಬಳಿಕ ಸಂಪಾದಕರೂ ಆದರು. ವಿಶ್ವವಾಣಿ ಪತ್ರಿಕೆಯ ಸಂಪಾದಕರಾಗಿ ಸದ್ಯ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಉತ್ತಮ ಬರಹಗಾರರೂ ಆಗಿದ್ದ ವಸಂತ ನಾಡಿಗೇರ ಅವರು ಕನ್ನಡಪ್ರಭದಲ್ಲಿ ಆರ್ಥಿಕ ವಿಶ್ಲೇಷಣೆ, ವಿಜಯಕರ್ನಾಟಕದಲ್ಲಿ ಅವರ ‘ಬಡಿಗೇರ್ ಹಾಗೂ ನಾಡಿಗೇರ್’ ಎನ್ನುವ ಕಾಮಿಕ್ ಅಂಕಣ ಜನಪ್ರಿಯವಾಗಿತ್ತು. ಕರ್ನಾಟಕ ಮಾಧ್ಯಮ ಅಕಾಡೆಮಿ, ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಭಾಜನರಾಗಿದ್ದರು.
ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.