newsics.com
ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಚಾಲನೆ ವೇಳೆಯೇ ಮೂರ್ಛೆರೋಗ ಕಾಣಿಸಿಕೊಂಡು ಕೆಳಗೆ ಬಿದ್ದ ಪರಿಣಾಮ ಬಸ್ಸು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಹನೂರು ತಾಲೂಕಿನ ಪುದುರಾಮಾಪುರದಲ್ಲಿ ಜರುಗಿದೆ.
ಕೊಳ್ಳೇಗಾಲದಿಂದ ಹೊರಟಿದ್ದ ಬಸ್ಸು ಪುದುರಾಮಾಪುರ ಬಳಿ ತೆರಳುತ್ತಿತ್ತು. ಈ ವೇಳೆ ಚಾಲಕ ಸುಭಾಷ್‌ಗೆ ಏಕಾಏಕಿ ಮೂರ್ಛೆ ಕಾಣಿಸಿಕೊಂಡಿದೆ. ತಕ್ಷಣ ಕೆಳಗೆ ಬಿದ್ದಿದ್ದಾರೆ. ಆಗ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಿಂತಿದೆ.
ಪುದುರಾಮಪುರ ಸಮೀಪ ಚಾಲಕ ಸುಭಾಷ್‌ಗೆ ಚಾಲನೆ ಮಾಡುತ್ತಿದ್ದಾಗಲೇ ದಿಢೀರ್ ಫಿಟ್ಸ್ ಕಾಣಿಸಿಕೊಂಡು ಕೆಳಗೆ ಬಿದ್ದಿದ್ದಾರೆ. ಬಸ್ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಿಂತಿದೆ.
ಆದರೆ, ಈ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿದ್ದ ಕಾರಣ ಸಂಭಾವ್ಯ ಅನಾಹುತ ತಪ್ಪಿದೆ. ಬಸ್‌ನಲ್ಲಿ ನಿರ್ವಾಹಕ ಮತ್ತು ಓರ್ವ ಪ್ರಯಾಣಿಕ ಮಾತ್ರ ಇದ್ದುದರಿಂದ ಹೆಚ್ಚಿನ ತೊಂದರೆಯಾಗಿಲ್ಲ.
ಚಾಲಕ ಸುಭಾಷ್ ಕಳೆದ 12 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಮೂರ್ಛೆರೋಗ ಇರುವುದರಿಂದ ಅವರಿಗೆ ಬೇರೆ ಜವಾಬ್ದಾರಿ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದೀಗ ಚಾಲಕ ಸುಭಾಷ್ ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.