newsics.com
ರಷ್ಯಾದ ಮಾಸ್ಕೋಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಒಂದು ತಿಂಗಳಾಗಿದೆ. ಅದರ ಬೆನ್ನಲ್ಲೇ ಮೋದಿ ಉಕ್ರೇನ್ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಘೋಷಿಸಿತ್ತು. ಇದೀಗ ಆ ಪ್ರವಾಸದ ದಿನಾಂಕವನ್ನು ಕೂಡ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 21 ಮತ್ತು 22ರಂದು ಪೋಲೆಂಡ್‌ಗೆ ಭೇಟಿ ನೀಡಲಿದ್ದಾರೆ. ಅದಾದ ನಂತರ ಆಗಸ್ಟ್ 23ರಂದು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರ ಆಗಸ್ಟ್ 21 ಮತ್ತು 22ರಂದು ಪೋಲೆಂಡ್‌ಗೆ ಭೇಟಿ ನೀಡಲಿದ್ದಾರೆ. 45 ವರ್ಷಗಳ ನಂತರ ಭಾರತದ ಪ್ರಧಾನಿ ಪೋಲೆಂಡ್‌ಗೆ ಭೇಟಿ ನೀಡುತ್ತಿರುವ ಕಾರಣ ಇದು ಮಹತ್ವದ ಭೇಟಿಯಾಗಿದೆ.
ಹಾಗೇ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರದ ಕೊನೆಯಲ್ಲಿ ಶುಕ್ರವಾರ (ಆಗಸ್ಟ್ 23) ಉಕ್ರೇನ್‌ಗೆ ಅಧಿಕೃತ ಭೇಟಿಯನ್ನು ಕೈಗೊಳ್ಳಲಿದ್ದಾರೆ. ಇದು ಒಂದು ಹೆಗ್ಗುರುತಾಗಿದೆ ಮತ್ತು ಐತಿಹಾಸಿಕ ಭೇಟಿಯಾಗಿದೆ. ನಾವು ನಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ 40 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಉಕ್ರೇನ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.