newsics.com
ಮುಂಬೈ: ಬಾಲಿವುಡ್ನ ಅತ್ಯಂತ ಜನಪ್ರಿಯ ಕಮಿಡಿಯನ್ ಒಬ್ಬರು 11 ಕೋಟಿ ರೂಪಾಯಿ ಸಾಲ ತೀರಿಸದ ಕಾರಣ ಅವರಿಗೆ ಸೇರಿದ ಜಮೀನನ್ನು ಸಿಬಿಐ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.
ರಾಜ್ಪಾಲ್ ಯಾದವ್ ಅವರಿಗೆ ಸೇರಿದ್ದು ಎನ್ನಲಾಗಿರುವ ಉತ್ತರ ಪ್ರದೇಶದ ಶಹಜಾನ್ಪುರದಲ್ಲಿರುವ ಆಸ್ತಿಯನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆ ರಾಜ್ಪಾಲ್ ಯಾದವ್ ಈ ಜಮೀನನ್ನು ಖರೀದಿ ಮಾಡಿದ್ದರು. ಅಸಲಿಗೆ ರಾಜ್ಪಾಲ್ ಯಾದವ್ ಬಹಳ ವರ್ಷಗಳ ಹಿಂದೆ ತಮ್ಮ ಪೋಷಕರಾದ ನೌರಂಗ್ ಮತ್ತು ಗೋಧಾವರಿ ಅವರುಗಳ ಹೆಸರಲ್ಲಿ ನಿರ್ಮಾಣ ಸಂಸ್ಥೆಯೊಂದನ್ನು ಆರಂಭ ಮಾಡಿದ್ದರು. ಅದಕ್ಕೆ ನೌರಂಗ್-ಗೋಧಾವರಿ ಎಂಟರ್ಟೈನ್ಮೆಂಟ್ ಎಂದು ಹೆಸರಿಟ್ಟಿದ್ದರು.
ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಸಿನಿಮಾ ಒಂದನ್ನು ನಿರ್ಮಾಣ ಮಾಡಿದ್ದರು ರಾಜ್ಪಾಲ್ ಯಾದವ್. ಆ ಸಿನಿಮಾ ನಿರ್ಮಾಣಕ್ಕೆ ಶಹಜಾನ್ಪುರದಲ್ಲಿನ ಜಮೀನು ಅಡವಿಟ್ಟು ಮೂರು ಕೋಟಿ ಸಾಲ ಪಡೆದಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಟ್ಟರ್ ಫ್ಲಾಪ್ ಆಯ್ತು. ರಾಜ್ಪಾಲ್ ಯಾದವ್ಗೆ ಸಾಲ ಮರುಪಾವತಿ ಮಾಡಲು ಆಗಲಿಲ್ಲ.
ಮೂರು ಕೋಟಿ ರೂಪಾಯಿ ಸಾಲ ಬಡ್ಡಿ, ಇನ್ನಿತರೆ ಶುಲ್ಕ, ದಂಡಗಳು ಸೇರಿಕೊಂಡು ಈಗ 11 ಕೋಟಿ ರೂಪಾಯಿಗಳಾಗಿದ್ದು, ನೊಟೀಸ್ಗಳನ್ನು ಕಳಿಸಿ-ಕಳಿಸಿ ಸುಸ್ತಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವರು ಇದೇ ತಿಂಗಳ ಎರಡನೇ ವಾರದಲ್ಲಿ ಶಹಜಾನ್ಪುರಕ್ಕೆ ತೆರಳಿ ರಾಜ್ಪಾಲ್ ಯಾದವ್ ಅವರಿಗೆ ಸೇರಿದ ಅಡವಿಟ್ಟಿದ್ದ ಜಮೀನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.