newsics.com
ಸಿಲಿಕಾನ್ ಸಿಟಿಯ ಸಾಫ್ಟ್ವೇರ್ ದಂಪತಿಗೆ ಸೈಬರ್ ಖದೀಮರು ವಂಚನೆ ಮಾಡಿದ್ದ 1 ಕೋಟಿ 40 ಲಕ್ಷ ರೂಪಾಯಿಗಳನ್ನ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.
ಉದ್ಯಾನ ನಗರಿಯ ಬಾಣಸವಾಡಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ದಂಪತಿಯಾದ ನೇಹಾ ಮತ್ತು ಲೋಕೇಶ್ (ಹೆಸರು ಬದಲಾಯಿಸಲಾಗಿದೆ) ಒಟ್ಟು 1 ಕೋಟಿ 53 ಲಕ್ಷ ರೂ.ಗಳ ವಂಚನೆಗೆ ಒಳಗಾಗಿದ್ದರು. ಇಂಗ್ಲೆಂಡ್ನಿಂದ ಕೆಲಸ ಮಾಡುತ್ತಿದ್ದ ದುಷ್ಕರ್ಮಿಗಳು ಹಣವನ್ನು ಇನ್ವೆಸ್ಟ್ ಮಾಡಿದರೆ ಅದಕ್ಕಿಂತ ಹೆಚ್ಚಿನ ಹಣ ಕೊಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಡ್ ಶೇರ್ ಮಾಡಿದ್ದರು. ಈ ಜಾಹೀರಾತನ್ನು ನೋಡಿದ್ದ ಬೆಂಗಳೂರಿನ ದಂಪತಿ ಅವರನ್ನು ಸಂಪರ್ಕಿಸಿದ್ದರು. ಹೀಗಾಗಿ ಖದೀಮರು ನಕಲಿ ವೆಬ್ಸೈಟ್ ಲಿಂಕ್ ಅನ್ನು ಶೇರ್ ಮಾಡಿದ್ದರು. ಈ ಲಿಂಕ್ ಸತ್ಯವೆಂದು ಗೊತ್ತಾಗಲೆಂದು ಉತ್ತರ ಭಾರತದ ಕೆಲ ಖಾತೆಗಳನ್ನ ಬಳಕೆ ಮಾಡಿದ್ದರು. ಇದನ್ನು ನಂಬಿದ್ದ ದಂಪತಿ ನಕಲಿ ವೆಬ್ಸೈಟ್ ಲಿಂಕ್ಗೆ 1 ಕೋಟಿ 53 ಲಕ್ಷ ರೂ.ಗಳ ಹೂಡಿಕೆ ಮಾಡಿದ್ದರು. ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಕೆಲವು ತಿಂಗಳ ಬಳಿಕ ದಂಪತಿ ಹಣ ವಾಪಸ್ ಪಡೆಯಲು ವೆಬ್‌ಸೈಟ್ಗೆ ಲಾಗ್ ಇನ್ ಆಗಲು ಟ್ರೈ ಮಾಡ್ತಾರೆ. ಆದರೆ ಲಾಗ್ ಇನ್ ಕ್ಯಾನ್ಸಲ್ ಮಾಡಲಾಗಿತ್ತು. ಹೀಗಾಗಿ ಮೋಸವಾಗಿರುವುದು ಗೊತ್ತಾಗಿ ದಂಪತಿ ಪೂರ್ವ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದ ಇನ್‌ಸ್ಪೆಕ್ಟರ್ ಉಮೇಶ್ ಕುಮಾರ್ ಅವರ ಟೀಮ್, 50 ಖಾತೆಗಳಲ್ಲಿ ಇದ್ದ ಹಣ ಪತ್ತೆ ಹಚ್ಚಿ ದಂಪತಿಗೆ ವಾಪಸ್ ಮಾಡಿದ್ದಾರೆ. ಆದರೆ ಇನ್ನು 13 ಲಕ್ಷ ರೂಪಾಯಿಗಳು ಏನಾಗಿದ್ದಾವೆ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.