newsics.com
ನವದೆಹಲಿ: ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಸಿದ್ಧವಾಗಿದೆ ಎಂದು ಆಹಾರ ಸಚಿವ ಪ್ರಲ್ಹಾದ್ ಜೋಶಿ ಘೋಷಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ರಾಜ್ಯಕ್ಕೆ ಅಕ್ಕಿಕೊಡಲು ಕೇಂದ್ರ ಸಿದ್ಧವಿದೆ. ಮನವಿ ಬಂದರೆ ಹೆಚ್ಚುವರಿ ಅಕ್ಕಿ ಕೊಡಲಿದ್ದೇವೆ. ಕೆಜಿಗೆ 28ರೂ.ನಂತೆ ನಾವು ಅಕ್ಕಿ ಕೊಡಲು ಸಿದ್ಧರಿದ್ದೇವೆ. ಎಷ್ಟು ಬೇಕಾದರೂ ಅಕ್ಕಿಕೊಡಲಿದ್ದೇವೆ ಎಂದು ಹೇಳಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಕರ್ನಾಟಕ ಸರ್ಕಾರದ ಪಾಲಿನ ಉಚಿತ 5 ಕೆಜಿ ಅಕ್ಕಿ ನೀಡಲು ಕೇಂದ್ರದಿಂದ ಅಕ್ಕಿ ದೊರೆಯುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರು ಆರೋಪಿಸುತ್ತಲೇ ಬಂದಿದ್ದಾರೆ. ದುಡ್ಡು ಕೊಟ್ಟರೂ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಸಿದ್ಧವಿಲ್ಲ. ಬಡವರ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂಬ ಆರೋಪ ನಿರಂತರ ಕೇಳಿಬಂದಿತ್ತು. ಕೇಂದ್ರ ಸರ್ಕಾರ ಬೇರೆಯದೇ ಕಾರಣ ನೀಡಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು.
ಈ ಹಿಂದೆ ರಾಜ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ಸುತರಾಂ ಒಪ್ಪಿರಲಿಲ್ಲ. ಇರುವ ಸ್ಟಾಕನ್ನೆಲ್ಲ ರಾಜ್ಯಕ್ಕೆ ಮಾರಾಟ ಮಾಡಿ ಖಾಲಿ ಮಾಡಿದರೆ ತುರ್ತು ಸಂದರ್ಭಗಳಲ್ಲಿ ವಿತರಣೆ ಮಾಡಲು ಕಷ್ಟ ಎಂಬುದು ಕೇಂದ್ರದ ವಾದವಾಗಿತ್ತು.
ಅಕ್ಕಿ ನೀಡುವಂತೆ ಕರ್ನಾಟಕ ಸರ್ಕಾರ ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿತ್ತು. ರಾಜ್ಯದಿಂದ ಸಚಿವ ಕೆಹೆಚ್ ಮುನಿಯಪ್ಪ ಖುದ್ದು ದೆಹಲಿಗೆ ಭೇಟಿ ಮಾಡಿ ಕೇಂದ್ರ ಸಚಿವರ ಜತೆ ಮಾತುಕತೆಯನ್ನೂ ನಡೆಸಿದ್ದರು. ಆದರೆ, ಪ್ರಯೋಜನವಾಗಿರಲಿಲ್ಲ.
ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ ಒಳವರ್ಗೀಕರಣಕ್ಕೆ ರಾಜ್ಯಗಳಿಗೆ ಅಧಿಕಾರವಿದೆ: ಸುಪ್ರೀಂ
ಮುಡಾ ಹಗರಣ: ಸಿಎಂ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಅನುಮತಿ ಸಾಧ್ಯತೆ, ಸಂಕಷ್ಟದಲ್ಲಿ ಸಿದ್ದರಾಮಯ್ಯ