newsics.com
ವಿಜಯಪುರ: ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಆರು ಜನ ನೀರುಪಾಲಾಗಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ. ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿ ಕೃಷ್ಣಾ ನದಿಯಲ್ಲಿ ದುರ್ಘಟನೆ ನಡೆದಿದೆ.
ಅಂದರ್ ಬಾಹರ್ (ಇಸ್ಪೇಟ್) ಆಡುವಾಗ ಪೊಲೀಸರು ದಾಳಿ ನಡೆಸಿದ ವೇಳೆ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದಾಗ ಏಳೆಂಟು ಜನರು ನೀರುಪಾಲು ಆಗಿರುವ ಶಂಕೆ ವ್ಯಕ್ತವಾಗಿದೆ. ಅದರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಪುಂಡಲೀಕ ಯಂಕಂಚಿ (35) ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಒಬ್ಬ ನದಿಯಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ನದಿ ಆಚೆಯ ನಡುಗಡ್ಡೆಗೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ಘಟನೆ ನಡೆದಿದ್ದು, ಸ್ಥಳಕ್ಕೆ ಕೊಲ್ಹಾರ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹೆಚ್ಚುವರಿ ಎಸ್.ಪಿ. ಶಂಕರ ಮಾರಿಹಾಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳೀಯರು ಹಾಗೂ ಅಧಿಕಾರಿಗಳಿಂದ ನೀರು ಪಾಲಾದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.