newsics.com
ಬಿಗ್‌ಬಾಸ್ ಕನ್ನಡ 11ಕ್ಕೆ ಮರಳಿ ಬಂದಿರುವ ನಟ ಕಿಚ್ಚ ಸುದೀಪ್ ತಾಯಿಯನ್ನು ನೆನೆದು ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ.
ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಸಲು ಶನಿವಾರ ಬಿಗ್ ಬಾಸ್ ವೇದಿಕೆಗೆ ಬಂದಿರುವ ಸುದೀಪ್ ತೀರಾ ಭಾವುಕರಾಗಿದ್ದಾರೆ.

ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯನಂತಹ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆಗೂ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾಗದ ಭಾರ ಎಂದು ಬಿಗ್‌ಬಾಸ್ ಧ್ವನಿಯೂ ಕೇಳಿಸಿದೆ.
ಕಿಚ್ಚನ ಕೋಟಿಗೊಬ್ಬ 2 ಚಿತ್ರದ ಹಾಡು ಪರಪಂಚ ನೀನೇ ನನ್ನ ಪರಪಂಚ ನೀನೆ ಎಂದು ಹಾಡುತ್ತಾ ಮಾಜಿ ಬಿಗ್‌ಬಾಸ್ ಸ್ಪರ್ಧಿ, ಸಿಂಗರ್ ವಾಸುಕಿ ವೈಭವ್ ಸ್ಟೇಜ್‌ಗೆ ಎಂಟ್ರಿಯಾಗಿದ್ದಾರೆ. ಹಾಡಿನ ಮೂಲಕ ಕಿಚ್ಚನ ತಾಯಿಗೆ ಮ್ಯೂಸಿಕ್ ಟ್ರಿಬ್ಯೂಟ್ ನೀಡಲಾಗಿದೆ. ಶೋ ನೋಡಲು ಬಂದ ಪ್ರೇಕ್ಷಕರು ಬಿಳಿ ಬಟ್ಟೆ ಧರಿಸಿ ಕ್ಯಾಂಡಲ್ ಹಚ್ಚಿ ಶೃದ್ಧಾಂಜಲಿ ಸಲ್ಲಿಸಿದ್ದಾರೆ.
ಕಿಚ್ಚನ ಈ ಕರ್ತವ್ಯ ಪ್ರಜ್ಞೆಯನ್ನು ಎಲ್ಲರೂ ಮೆಚ್ಚಿದ್ದಾರೆ. ನೋವಿನಲ್ಲಿ ನಿಮ್ಮ ಜವಾಬ್ದಾರಿ ನಿಭಾಯಿಸೋ ನಿಮ್ಮ ಈ ಕಾರ್ಯಕ್ಕೆ ಯಾರೂ ಸರಿ ಸಾಟಿ ಇಲ್ಲ. ಹೆತ್ತ ತಾಯಿಯನ್ನು ಕಳ್ಕೊಂಡ್ರು ಕೂಡ ಕರ್ತವ್ಯಕ್ಕೆ ಹಾಜರಾಗುವ ನಿಮ್ಮ ಗುಣ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಅಕ್ಟೋಬರ್ 20ರಂದು ನಿಧನರಾದರು. ಹೀಗಾಗಿ ಕಳೆದ ವಾರ ಕಿಚ್ಚ ಸುದೀಪ್ ಬಿಗ್‌ಬಾಸ್ ಶೋ ನಡೆಸಿಕೊಡಲು ಬಂದಿರಲಿಲ್ಲ. ಬದಲಾಗಿ ಬಿಗ್‌ಬಾಸ್ ಮನೆಗೆ ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ವಿಶೇಷ ಸ್ಪರ್ಧಿಯಾಗಿ ಬಂದಿದ್ದರು.
ಇನ್ನು, ಬಿಗ್‌ಬಾಸ್ ಕನ್ನಡ 11ರಲ್ಲಿ ಈ ವಾರ ಮನೆಯಿಂದ ಹೊರಹೋಗಲು ಗೌತಮಿ ಮತ್ತು ತ್ರಿವಿಕ್ರಮ್ ಬಿಟ್ಟು ಎಲ್ಲರೂ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದಾರೆ. ಜೊತೆಗೆ ಮನೆಯಿಂದ ಹೊರಹೋಗುವಾಗ ವಿಶೇಷ ಅಧಿಕಾರದಿಂದ ಹಂಸಾ ಅವರು ಹನುಮಂತ ಅವರನ್ನು ನಾಮಿನೇಟ್ ಮಾಡಿದ್ದರು. ಮಿಕ್ಕಂತೆ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತುಕಾಲಿ ಮಾನಸ , ಉಗ್ರಂ ಮಂಜು, ಅನುಷಾ ರೈ , ಧರ್ಮ ಕೀರ್ತಿರಾಜ್ , ಐಶ್ವರ್ಯಾ, ಧನ್‌ರಾಜ್, ಶಿಶರ್ ಶಾಸ್ತ್ರಿ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಈ ವಾರ ಯಾರಿಗೆ ದೀಪಾವಳಿ ಸಿಹಿ ಮತ್ತು ಯಾರಿಗೆ ಕಹಿ ಎಂಬುದನ್ನು ಕಾದು ನೋಡಬೇಕಿದೆ.