ತಮಿಳುನಾಡು ಚುನಾವಣೆಯಲ್ಲಿ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ಟಿವಿಕೆ ಮೊದಲ ಚುನಾವಣೆಯಲ್ಲಿಯೇ 108 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆ, ಪಕ್ಕದ ಆಂಧ್ರ ಪ್ರದೇಶದಲ್ಲಿ ಸೂಪರ್ ಸ್ಟಾರ್ ಮತ್ತು ಡಿಸಿಎಂ ಪವನ್ ಕಲ್ಯಾಣ್ ಟ್ರೋಲ್ಗೆ ಗುರಿಯಾಗಿದ್ದರು.
ಈ ಕುರಿತು ಮಾತನಾಡಿದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್,ನಾನು ದಳಪತಿ ವಿಜಯ್ ಮಾದರಿಯಲ್ಲೇ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಬೇಕು ಎಂದು ಅಭಿಮಾನಿಗಳು ಇಚ್ಚಿಸಿದ್ದಾರೆ ಎಂದು ಹೇಳಿದ್ದಾರೆ
ಹೌದು, ವಿಜಯ್ ಅವರ ಹೆಸರನ್ನು ಉಲ್ಲೇಖಿಸದೆ, ತಮಿಳುನಾಡು ಚುನಾವಣೆಗಳು ಮತ್ತು ಅವರು ಮುಖ್ಯಮಂತ್ರಿಯಾದಾಗಿನಿಂದ ಜನರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು.
ಮಂಗಳಗಿರಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪವನ್ ಕಲ್ಯಾಣ್, ವಿಜಯ್, ತಮಿಳುನಾಡಿನ ಸಿಎಂ ಆದ ಬಗ್ಗೆ ಹಾಗೂ ಅದಾದ ಬಳಿಕ ತಮ್ಮ ಮೇಲೆ ಬರುತ್ತಿರುವ ಒತ್ತಡದ ಬಗ್ಗೆಯೂ ಮಾತನಾಡಿದ್ದಾರೆ. ಪವನ್ ಕಲ್ಯಾಣ್ ಅವರ ಸಹೋದರ ಚಿರಂಜೀವಿ ಅವರು ದಳಪತಿ ವಿಜಯ್ ಅವರೊಟ್ಟಿಗೆ ಇತ್ತೀಚೆಗಷ್ಟೆ ದೂರವಾಣಿ ಮೂಲಕ ಮಾತನಾಡಿದ್ದರು. ಅದರ ಬೆನ್ನಲ್ಲೆ ಇದೀಗ ಪವನ್ ಕಲ್ಯಾಣ್ ಅವರು ವಿಜಯ್ ಬಗ್ಗೆ ಮಾತನಾಡಿದ್ದಾರೆ.
ಮಂಗಳಗಿರಿಯಲ್ಲಿರುವ ಜನಸೇನಾ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪವನ್, ವಿಜಯ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, “ತಮಿಳುನಾಡು ಚುನಾವಣೆ ನಡೆದು ಅವರು (ವಿಜಯ್) ಮುಖ್ಯಮಂತ್ರಿಯಾದಾಗಿನಿಂದ ಜನರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದರು. ಮುಂದುವರಿದು, ‘ನಮ್ಮ ನೆರೆಯ ರಾಜ್ಯದಲ್ಲಿ ನಟರೊಬ್ಬರು ಪಕ್ಷ ಸ್ಥಾಪಿಸಿ ಮುಖ್ಯಮಂತ್ರಿಯಾಗಿದ್ದಾರೆ. ನಾನು ಕೂಡ ಆಂಧ್ರಪ್ರದೇಶದಲ್ಲಿ ಇದೇ ರೀತಿ ಮಾಡಬೇಕಿತ್ತು ಎಂದು ಅನೇಕರು ನನಗೆ ಸಂದೇಶ ಕಳುಹಿಸುತ್ತಿದ್ದಾರೆ’ ಎಂದು ಹೇಳಿದರು.
ತೆಲುಗಿನ ಗಾದೆಯೊಂದನ್ನು ಹೇಳಿದ ಪವನ್ ಕಲ್ಯಾಣ್ ‘ಊರವರ ಮದುವೆಗೆ, ಇನ್ನಿಲ್ಲದ ಸಡಗರ’ ಎನ್ನುತ್ತಾರಲ್ಲ ಹಾಗೆ. ಇದು ಸಣ್ಣ ಮಕ್ಕಳು ತಮ್ಮ ಕುಟುಂಬದ ಮದುವೆ ಅಲ್ಲದಿದ್ದರೂ ಸುತ್ತಲೂ ಓಡಾಡುವ ಸಡಗರದಂತಿದೆ. ಆಂಧ್ರಪ್ರದೇಶದ ಪರಿಸ್ಥಿತಿಯೇ ಬೇರೆ. ಅವರು ಹೇಳಿದಂತೆ ನಾನು 2019 ರ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಆಗ ಅವರು (ಜನ) ಏನು ಮಾಡಿದರು? ಮಂತ್ರಿಗಳು ಕೂಡ ನನ್ನ ಜೊತೆ ನಿಲ್ಲಲಿಲ್ಲ. ಆದ್ದರಿಂದ ದಯವಿಟ್ಟು ಹೋಲಿಕೆ ಮಾಡಬೇಡಿ’ ಎಂದು ವಿನಂತಿಸಿದರು.
ಪವನ್ ಕಲ್ಯಾಣ್ ಅವರು 2014 ರಲ್ಲಿ ‘ಜನಸೇನಾ’ ಪಕ್ಷವನ್ನು ಸ್ಥಾಪಿಸಿದರು. ಬಳಿಕ 2019 ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಸ್ವತಃ ಪವನ್ ಕಲ್ಯಾಣ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಆದರೆ ಎರಡೂ ಕಡೆ ಸೋತರು. ಅವರ ಪಕ್ಷಕ್ಕೆ ತೀವ್ರ ನಿರಾಸೆ ಆಗಿತ್ತು. ಆದರೆ 6% ಮತಗಳನ್ನು ಅವರ ಪಕ್ಷ ತೆಗೆದುಕೊಂಡಿತು. ಆದರೆ 2024 ರಲ್ಲಿ ಟಿಡಿಪಿ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿ ಖುದ್ದು ಪೀಠಾಪುರಂ ಕ್ಷೇತ್ರದಿಂದ ಗೆದ್ದಿದ್ದು ಮಾತ್ರವಲ್ಲದೆ ಅವರ ಪಕ್ಷದ ಇನ್ನೂ ಹಲವು ಅಭ್ಯರ್ಥಿಗಳು ಗೆದ್ದು ಶಾಸಕರಾದ್ರು.
ಜನಸಂಖ್ಯೆ ಹೆಚ್ಚಿಸಲು ಆಂಧ್ರ CM ಮಹತ್ವ ಘೋಷಣೆ; 3ನೇ ಮಗುವಿಗೆ 30,000, 4ನೇ ಮಗುವಿಗೆ 40,000 ನಗದು!