newsics.com/ನ್ಯೂಸಿಕ್ಸ್
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಸಿ) 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಭಾಷಾ ಅಧ್ಯಯನ ಕ್ರಮದಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ.
ಮಂಡಳಿ ಹೊರಡಿಸಿರುವ ಹೊಸ ಸುತ್ತೋಲೆಯ ಪ್ರಕಾರ, 2026-27ರ ಶೈಕ್ಷಣಿಕ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಮತ್ತು ಪರಿಷ್ಕೃತ ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮಕ್ಕೆ ಅನುಗುಣವಾಗಿ ಭಾಷಾ ಶಿಕ್ಷಣವನ್ನು ಅಳವಡಿಸಿದೆ.
ಪರಿಷ್ಕೃತ ನಿಯಮದಡಿ, 9ನೇ ತರಗತಿಯಿಂದ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕಾಗಲಿದ್ದು, ಅವುಗಳಲ್ಲಿ ಕನಿಷ್ಠ ಎರಡು ಭಾರತೀಯ ಭಾಷೆಗಳಾಗಿರಬೇಕು. ಈ ಹೊಸ ವ್ಯವಸ್ಥೆಯು 2026ರ ಜುಲೈ 1ರಿಂದ ಜಾರಿಗೆ ಬರಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ಅನ್ವಯ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಬಿಎಸ್‌ಇ ತಿಳಿಸಿದೆ. ಹೊಸದಾಗಿ ಬಿಡುಗಡೆಯಾಗಿರುವ ಎನ್‌ಸಿಇಆರ್‌ಟಿ ಪಠ್ಯಕ್ರಮವು ಪ್ರೌಢಶಾಲಾ ಹಂತದಲ್ಲಿ R1, R2 ಮತ್ತು R3 ಎಂಬ ಮೂರು ಭಾಷೆಗಳ ಅಧ್ಯಯನವನ್ನು ಒಳಗೊಂಡಿದೆ ಎಂದು ಮಂಡಳಿ ಉಲ್ಲೇಖಿಸಿದೆ.
ಈ ನಿಯಮಾವಳಿಗೆ ಅನುಗುಣವಾಗಿ ಸಿಬಿಎಸ್‌ಇ ತನ್ನ ಶೈಕ್ಷಣಿಕ ರಚನೆಯನ್ನು ಪರಿಷ್ಕರಿಸಲು ನಿರ್ಧರಿಸಿದೆ. ವಿದ್ಯಾರ್ಥಿಗಳು ಉಳಿದೆರಡು ಭಾಷೆಗಳಾಗಿ ಭಾರತೀಯ ಭಾಷೆಗಳನ್ನು ಆಯ್ಕೆ ಮಾಡಿಕೊಂಡರೆ ಮಾತ್ರ, ಮೂರನೇ ಭಾಷೆಯಾಗಿ ವಿದೇಶಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಮಂಡಳಿ ಸ್ಪಷ್ಟಪಡಿಸಿದೆ. ವಿದೇಶಿ ಭಾಷೆಯನ್ನು ಹೆಚ್ಚುವರಿ ನಾಲ್ಕನೇ ಭಾಷೆಯಾಗಿಯೂ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
10ನೇ ಕ್ಲಾಸ್‌ಗೆ ಮೂರನೇ ಭಾಷೆಗೆ ಪರೀಕ್ಷೆ ಇಲ್ಲ: ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲು, 10ನೇ ತರಗತಿಯ ಮೂರನೇ ಭಾಷೆಗೆ (R3) ಬೋರ್ಡ್ ಪರೀಕ್ಷೆಯನ್ನು ನಡೆಸದಿರಲು ಸಿಬಿಎಸ್‌ಇ ನಿರ್ಧರಿಸಿದೆ.
ಈ ವಿಷಯದ ಮೌಲ್ಯಮಾಪನವನ್ನು ಶಾಲೆಗಳೇ ಆಂತರಿಕವಾಗಿ ನಡೆಸಲಿವೆ. ಆದಾಗ್ಯೂ, ವಿದ್ಯಾರ್ಥಿಯ ಪ್ರಗತಿಯನ್ನು ಸಿಬಿಎಸ್‌ಇ ಪ್ರಮಾಣಪತ್ರದಲ್ಲಿ ನಮೂದಿಸಲಾಗುತ್ತದೆ. ಮೂರನೇ ಭಾಷೆಯ ನಿಯಮದ ಕಾರಣದಿಂದಾಗಿ ಯಾವುದೇ ವಿದ್ಯಾರ್ಥಿಯನ್ನು 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗದಂತೆ ತಡೆಯಲಾಗುವುದಿಲ್ಲ ಎಂದೂ ಮಂಡಳಿ ಸ್ಪಷ್ಟಪಡಿಸಿದೆ.
ಹೊಸ ಭಾಷಾ ನಿಯಮವನ್ನು ಜಾರಿಗೊಳಿಸಲು ಸಿದ್ಧತೆಗಳನ್ನು ಪ್ರಾರಂಭಿಸುವಂತೆ ಸಿಬಿಎಸ್‌ಇ ಎಲ್ಲಾ ಶಾಲೆಗಳಿಗೆ ಸೂಚಿಸಿದೆ. 6 ರಿಂದ 9ನೇ ತರಗತಿಗಳ R3 ಭಾಷೆಗೆ ಸಂಬಂಧಿಸಿದ ವಿವರಗಳನ್ನು 2026ರ ಜೂನ್ 30ರೊಳಗೆ ಶಾಲೆಗಳು ಓಯಸಿಸ್ (OASIS) ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಬೇಕಿದೆ.
ಲಭ್ಯವಿರುವ ಸಂಪನ್ಮೂಲಗಳು ಮತ್ತು ಕಾರ್ಯಸಾಧ್ಯತೆಯ ಆಧಾರದ ಮೇಲೆ ಶಾಲೆಗಳು ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, 3 ಭಾಷೆಗಳಲ್ಲಿ ಕನಿಷ್ಠ 2 ಭಾಷೆಗಳು ಭಾರತೀಯ ಭಾಷೆಗಳಾಗಿರುವುದನ್ನು ಶಾಲೆಗಳು ಖಚಿತಪಡಿಸಿಕೊಳ್ಳಬೇಕು ಎಂದು ಮಂಡಳಿ ತಿಳಿಸಿದೆ.
ಶಿಕ್ಷಕರ ಕೊರತೆ ಎದುರಾದರೆ ಏನು ಮಾಡಬೇಕು? ಕೆಲವು ಶಾಲೆಗಳಲ್ಲಿ ಭಾಷಾ ಶಿಕ್ಷಕರ ಕೊರತೆ ಇರಬಹುದು ಎಂಬುದನ್ನು ಸುತ್ತೋಲೆಯಲ್ಲಿ ಒಪ್ಪಿಕೊಳ್ಳಲಾಗಿದೆ. ಇಂತಹ ಸಂದರ್ಭಗಳಲ್ಲಿ, ಸಂಬಂಧಪಟ್ಟ ಭಾರತೀಯ ಭಾಷೆಯ ಬಗ್ಗೆ ಸಾಕಷ್ಟು ಜ್ಞಾನವಿರುವ ಇತರೆ ವಿಷಯಗಳ ಶಿಕ್ಷಕರ ಸಹಾಯವನ್ನು ಶಾಲೆಗಳು ತಾತ್ಕಾಲಿಕವಾಗಿ ಪಡೆದುಕೊಳ್ಳಬಹುದು.
ಶಾಲೆಗಳು ಕ್ಲಸ್ಟರ್ ಆಧಾರಿತ ಬೋಧನಾ ಮಾದರಿಗಳು, ಆನ್‌ಲೈನ್ ಅಥವಾ ಹೈಬ್ರಿಡ್ ತರಗತಿಗಳನ್ನು ಅಳವಡಿಸಿಕೊಳ್ಳಬಹುದು ಅಥವಾ ನಿವೃತ್ತ ಭಾಷಾ ಶಿಕ್ಷಕರ ಸಹಾಯವನ್ನು ಪಡೆಯಬಹುದು ಅಥವಾ ಅರ್ಹ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಹುದು. ಈ ಕ್ರಮಗಳು ಕೇವಲ ಪರಿವರ್ತನಾ ಅವಧಿಗೆ ಮಾತ್ರ ಸೀಮಿತ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ.
ಮೂರನೇ ಭಾಷೆಯ (R3) ಹೊಸ ಪಠ್ಯಪುಸ್ತಕಗಳು ಲಭ್ಯವಾಗುವವರೆಗೆ, 9ನೇ ತರಗತಿ ವಿದ್ಯಾರ್ಥಿಗಳು 6ನೇ ತರಗತಿಯ ಭಾಷಾ ಪಠ್ಯಪುಸ್ತಕಗಳನ್ನು ಬಳಸಲಿದ್ದಾರೆ ಎಂದು ಸಿಬಿಎಸ್‌ಇ ತಿಳಿಸಿದೆ.
ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯವನ್ನು ಬಲಪಡಿಸಲು ಶಾಲೆಗಳು ಸ್ಥಳೀಯ ಸಾಹಿತ್ಯ, ಕವಿತೆಗಳು, ಕಥೆಗಳು ಮತ್ತು ಇತರೆ ಓದುವ ಸಾಮಗ್ರಿಗಳನ್ನು ಸೇರಿಸಿಕೊಳ್ಳಬಹುದು. ಅನುಷ್ಠಾನಕ್ಕೆ ಸಂಬಂಧಿಸಿದ ವಿವರವಾದ ಮಾರ್ಗಸೂಚಿಗಳನ್ನು 2026ರ ಜೂನ್ 15ರೊಳಗೆ ಬಿಡುಗಡೆ ಮಾಡಲಾಗುವುದು ಎಂದು ಮಂಡಳಿ ಹೇಳಿದೆ.
ವಿಶೇಷ ವರ್ಗದ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ವಿನಾಯಿತಿ: ವಿಶೇಷ ಅಗತ್ಯವಿರುವ ಮಕ್ಕಳಿಗೆ (CwSN) ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ವಿನಾಯಿತಿಗಳು ಮುಂದುವರಿಯಲಿವೆ ಎಂದು ಸಿಬಿಎಸ್‌ಇ ತಿಳಿಸಿದೆ. ವಿದೇಶದಿಂದ ಹಿಂದಿರುಗುವ ವಿದ್ಯಾರ್ಥಿಗಳಿಗೆ ಮತ್ತು ಭಾರತದ ಹೊರಗಿನ ಸಿಬಿಎಸ್‌ಇ ಸಂಯೋಜಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೆಲವು ಸಡಿಲಿಕೆಗಳನ್ನು ನೀಡಬಹುದು.
ಈ ಬದಲಾವಣೆಗಳ ಉದ್ದೇಶ ಶೈಕ್ಷಣಿಕ ಒತ್ತಡವನ್ನು ಹೆಚ್ಚಿಸುವುದಲ್ಲ. ಬದಲಿಗೆ, ವಿದ್ಯಾರ್ಥಿಗಳಲ್ಲಿ ಬಹುಭಾಷಾ ಕಲಿಕೆಯನ್ನು ಉತ್ತೇಜಿಸುವುದಾಗಿದೆ ಎಂದು ಸಿಬಿಎಸ್‌ಇ ತನ್ನ ಸುತ್ತೋಲೆಯಲ್ಲಿ ಒತ್ತಿಹೇಳಿದೆ.
ಹೊಸ ವ್ಯವಸ್ಥೆಯ ಕುರಿತು ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಕಾರಾತ್ಮಕವಾಗಿ ಮಾಹಿತಿ ನೀಡುವಂತೆ ಮಂಡಳಿ ಶಾಲೆಗಳಿಗೆ ಮನವಿ ಮಾಡಿದೆ. ಸಿಬಿಎಸ್‌ಇ ಪ್ರಕಾರ, ಈ ಪರಿಷ್ಕೃತ ನೀತಿಯು ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಬೆಳೆಸಿಕೊಳ್ಳಲು ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
Trump china visit ಹ್ಯಾಕ್ ಭೀತಿಗೆ ಯುಎಸ್‌ನಲ್ಲೇ ಫೋನ್ ಬಿಟ್ಟು ಚೀನಾಗೆ ಹೋಗಿದ್ರಾ ಟ್ರಂಪ್!?
ಜನಸಂಖ್ಯೆ ಹೆಚ್ಚಿಸಲು ಆಂಧ್ರ CM ಮಹತ್ವ ಘೋಷಣೆ; 3ನೇ ಮಗುವಿಗೆ 30,000, 4ನೇ ಮಗುವಿಗೆ 40,000 ನಗದು!