newsics.com/ನ್ಯೂಸಿಕ್ಸ್
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ 108 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 118 ತಲುಪಲು ಟಿವಿಕೆ ಪಕ್ಷಕ್ಕೆ ಇನ್ನೂ 10 ಸ್ಥಾನಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ವಿಜಯ್ ಅವರು ತಮ್ಮ ನೂತನ ಶಾಸಕರೊಂದಿಗೆ ಸಭೆ ನಡೆಸಿ, ರಾಜ್ಯಪಾಲರಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿ ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ. ಸರ್ಕಾರ ರಚನೆಗೆ ವಿಜಯ್ ಅವರು ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ.
https://youtube.com/shorts/iatQVbaFb3g?si=I11csgvje-MFvvAP
ಟಿವಿಕೆ 108 ಸ್ಥಾನ ಗೆದ್ದಿರುವುದರಿಂದ ಮೇಲ್ನೋಟಕ್ಕೆ 10 ಶಾಸಕರ ಕೊರತೆ ಎನ್ನಿಸಿದರೂ, ಅಸಲಿ ಲೆಕ್ಕಾಚಾರ ಬೇರೆಯೇ ಇದೆ. ಬಹುಮತ ಸಾಬೀತಿಗೆ ವಿಜಯ್ಗೆ ಕನಿಷ್ಠ 12 ಶಾಸಕರ ಬೆಂಬಲ ಅನಿವಾರ್ಯವಾಗಿದೆ.
ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಾಗ ಟಿವಿಕೆ ಪಕ್ಷದ ಶಾಸಕರೊಬ್ಬರೇ ಸಭಾಪತಿಯಾಗಲಿದ್ದಾರೆ (ಸ್ಪೀಕರ್). ನಿಯಮಗಳ ಪ್ರಕಾರ ಸ್ಪೀಕರ್ ಮತ ಚಲಾಯಿಸುವಂತಿಲ್ಲ (ಸಮಾನ ಮತಗಳು ಬಂದಾಗ ಹೊರತುಪಡಿಸಿ).
ವಿಜಯ್ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಹೀಗಾಗಿ ಸದನದಲ್ಲಿ ಅವರ ಒಂದು ಮತ ಮಾತ್ರ ಎಣಿಕೆಯಾಗುತ್ತದೆ. (ಒಂದು ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕಾಗುತ್ತದೆ). ಹೀಗಾಗಿ ಟಿವಿಕೆ ಶಾಸಕರ ಬಲ 108 ರಿಂದ 106 ಕ್ಕೆ ಇಳಿಯುತ್ತದೆ. ಈ ಕಾರಣದಿಂದ 118ರ ಗಡಿ ತಲುಪಲು ಇನ್ನು 12 ಶಾಸಕರ ಬೆಂಬಲ ಬೇಕೇ ಬೇಕು.