newsics.com/ನ್ಯೂಸಿಕ್ಸ್
ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವ ಪಂಚರಾಜ್ಯಗಳ ಚುನಾವಣೆಯ ಮತದಾನ ಪ್ರಕ್ರಿಯೆಯು ಏಪ್ರಿಲ್ 29ರ ಬುಧವಾರದಂದು ಕೊನೆಗೊಳ್ಳಲಿದೆ. ಪಶ್ಚಿಮ ಬಂಗಾಳದ ಎರಡನೇ ಹಾಗೂ ಅಂತಿಮ ಹಂತದ ವಿಧಾನಸಭಾ ಚುನಾವಣೆಯು ಬುಧವಾರ ಸಂಜೆ ಮುಕ್ತಾಯಗೊಳ್ಳಲಿದ್ದು, ಇಡೀ ದೇಶದ ಚಿತ್ತ ಈಗ ಮತದಾನೋತ್ತರ ಸಮೀಕ್ಷೆಗಳ ಕಡೆಗೆ ನೆಟ್ಟಿದೆ.
ಪಶ್ಚಿಮ ಬಂಗಾಲ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶ ಏನಾಗಬಹುದು ತಿಳಿಸಿದೆ.
ಕೇರಳದಲ್ಲಿ ಈ ಬಾರಿ ಆಡಳಿತಾರೂಢ ಎಲ್ ಡಿಎಫ್, ವಿಪಕ್ಷ ಯುಡಿಎಫ್ ಜೊತೆಗೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಕೂಡಾ ಟಫ್ ಫೈಟ್ ನೀಡಿದೆ. ಈ ಬಾರಿ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಅಧಿಕಾರ ಸಿಗುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲೂ ಎಲ್ ಡಿಎಫ್ ಗೆ ಭಾರೀ ಹಿನ್ನಡೆಯಾಗಿತ್ತು. ಕೇರಳದಿಂದ ಯುಡಿಎಫ್ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇನ್ನೊಂದೆಡೆ ತಿರುವನಂತಪುರಂ ಮತ್ತು ಕಾಸರಗೋಡಿನಲ್ಲಿ ಒಂದು ಕ್ಷೇತ್ರ ಬಿಜೆಪಿ ಪಾಲಾಗಬಹುದು ಎಂಬ ನಿರೀಕ್ಷೆಯಿದೆ.
ಯುಡಿಎಫ್ ಗೆ ಬಹುಮತ ಸಾಧ್ಯತೆ, ಗೆಲ್ಲಬಹುದಾದ ಸ್ಥಾನಗಳು 100 ಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಅಸ್ಸಾಂ ಈ ಬಾರಿ ಹೆಚ್ಚು ಕುತೂಹಲ ಕೆರಳಿಸಿದ ಕ್ಷೇತ್ರ. ಇಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಪ್ರಿಯಾಂಕ್ ಖರ್ಗೆ, ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರಚಾರ ನಡೆಸಿದರೂ ಇಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ವರ್ಚಸ್ಸು ಬಿಜೆಪಿ ಕೈ ಹಿಡಿಯಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.
ಪಶ್ಚಿಮ ಬಂಗಾಲದಲ್ಲಿ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯುವ ಯತ್ನದಲ್ಲಿದೆ. ಒಂದು ವೇಳೆ ಬಿಜೆಪಿ ಇಲ್ಲಿ ಗೆದ್ದರೆ ಅದು ಐತಿಹಾಸಿಕ ಗೆಲುವಾಗಲಿದೆ. ಆದರೆ ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೋಲಿಸುವುದು ಅಷ್ಟು ಸುಲಭವಲ್ಲ. ಆದರೆ ಈ ಬಾರಿ ಇಲ್ಲಿ ಮತಪಟ್ಟಿ ಪರಿಷ್ಕರಣೆ, ಸಿಆರ್ ಪಿಎಫ್ ಯೋಧರಿಂದ ಬಿಗಿ ಭದ್ರತೆ ನಡುವೆ ನಡೆದ ಚುನಾವಣೆ, ಮಮತಾ ಆಡಳಿತದಲ್ಲಿ ಹಿಂದೂಗಳ ಮೇಲೆ ನಡೆದಿದ್ದ ಹಿಂಸಾಚಾರಗಳು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ. ಇಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಈ ಬಾರಿ ನೇರ ಹಣಾಹಣಿಯಿದೆ. ಕಾಂಗ್ರೆಸ್ ಸ್ಪರ್ಧೆಯಲ್ಲಿದ್ದರೂ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಅದಕ್ಕೆ ಅಷ್ಟು ಶಕ್ತಿಯಿಲ್ಲ.
ತಮಿಳುನಾಡು ಚುನಾವಣೆ ಫಲಿತಾಂಶ ಈ ಬಾರಿ ತೀವ್ರ ಕುತೂಹಲ ಕೆರಳಿಸಿದೆ. ಹೊಸದಾಗಿ ಪಕ್ಷ ಸ್ಥಾಪಿಸಿ ಸ್ಪರ್ಧಿಸಿರುವ ದಳಪತಿ ವಿಜಯ್ ಅವರ ಟಿವಿಕೆ ಕಿಂಗ್ ಮೇಕರ್ ಆಗುವ ವಿಶ್ವಾಸದಲ್ಲಿದೆ. ಇಲ್ಲಿ ಡಿಎಂಕೆ, ಎಐಡಿಎಂಕೆ ಮತ್ತು ಟಿವಿಕೆ ನಡುವೆ ಹಣಾಹಣಿಯಿದೆ. ಬಿಜೆಪಿ ಇಲ್ಲಿ ಮಿತ್ರ ಪಕ್ಷ ಎಐಡಿಎಂಕೆ ಜೊತೆ ಸರ್ಕಾರ ರಚಿಸುವ ಸರ್ಕಸ್ ಮಾಡುತ್ತಿದೆಯಾದರೂ ಅದು ಅಷ್ಟು ಸುಲಭವಲ್ಲ. ಡಿಎಂಕೆ ನಾಯಕತ್ವದ ವರ್ಚಸ್ಸು ತಮಿಳುನಾಡಿನಲ್ಲಿ ಪಕ್ಷದ ಕೈ ಹಿಡಿಯಬಹುದು.
https://www.newsics.com/2026/04/29/thunderstorms-and-hailstorms-in-the-state/