ಭವಾನಿಪುರ: ತಮ್ಮ ರ್ಯಾಲಿ ನಡೆಯುತ್ತಿದ್ದ ಸ್ಥಳದ ಸಮೀಪವೇ ಬಿಜೆಪಿ ಕೂಡ ಸಭೆ ಹಮ್ಮಿಕೊಂಡಿದ್ದ ಕಾರಣ, ಕೋಪಗೊಂಡ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಘಟನೆ ಅವರ ಕ್ಷೇತ್ರವಾಗಿರುವ ಭವಾನಿಪುರದಲ್ಲಿ ಭಾನುವಾರ ನಡೆದಿದೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಟಿಎಂಸಿ ವೇದಿಕೆಯಿದ್ದ 100 ಮೀ. ದೂರದಲ್ಲಿ ರ್ಯಾಲಿ ಆಯೋಜನೆ ಮಾಡಿದ್ದು, ಬೃಹತ್ ಧ್ವನಿವರ್ಧಕಗಳನ್ನು ಅಳವಡಿಸಲಾಗಿತ್ತು. ಇದರಿಂದ ಮಮತಾಗೆ ಕಿರಿಕಿರಿಯಾಗಿದ್ದು, ವೇದಿಕೆಯಿಂದ ಇಳಿದು ಹೊರನಡೆದಿದ್ದಾರೆ. ಪರಿಣಾಮ ಟಿಎಂಸಿ ಬೆಂಬಲಿಗರು ಬಿಜೆಪಿ ರ್ಯಾಲಿ ನಡೆಯುತ್ತಿದ್ದಲ್ಲಿಗೆ ತೆರಳಿ ಗದ್ದಲ ಎಬ್ಬಿಸಿದ್ದಾರೆ. ಎರಡೂ ಕಡೆಯವರು ಘೋಷಣೆ ಕೂಗತೊಡಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಬೇಕಾಯಿತು.
ಸೋಲಿನ ಭಯದಿಂದ ಹೀಗಾಗಿದೆ: ಬಿಜೆಪಿ ಟೀಕೆ
ಗಲಾಟೆ ನಡೆದ ವೇಳೆ ರ್ಯಾಲಿಗೆ ಆಗಮಿಸಿರದ ಅಧಿಕಾರಿ ಪ್ರತಿಕ್ರಿಯಿಸಿ, ‘ಮಮತಾರಿಂದಲೇ ಗದ್ದಲ ಸೃಷ್ಟಿಯಾಗಿದೆ. ಈ ಗೂಂಡಾ ಆಡಳಿತಕ್ಕೆ ತಕ್ಕ ಉತ್ತರ ಕೊಡುತ್ತೇವೆ’ ಎಂದು ತಿರುಗೇಟು ನೀಡಿದರು. ಅತ್ತ ಅಮಿತ್ ಮಾಳವೀಯ ಮಾತನಾಡಿ, ‘ಪಕ್ಷದ ಸೋಲಿನ ಭಯದಿಂದ ಹೀಗಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಮೋದಿ
‘ಮಹಿಳೆಯರ ಮೇಲೆ ದೌರ್ಜನ್ಯವೆಸಗುವ ಗೂಂಡಾಗಳಿಗೆ ಟಿಎಂಸಿ ರಕ್ಷಣೆ ನೀಡುತ್ತಿದೆ. ಆದರೆ ಬಿಜೆಪಿಯು ಸಂದೇಶಖಾಲಿಯಲ್ಲಿ ದಾಳಿಗೀಡಾಗಿದ್ದ ರೇಖಾ ಪಾತ್ರಾ ಹಾಗೂ ಆರ್ಜಿ ಕರ್ ಅತ್ಯಾ*ಚಾರ ಸಂತ್ರಸ್ತೆಯ ತಾಯಿ ರತ್ನಾ ದೇಬನಾಥ್ಗೆ ಟಿಕೆಟ್ ನೀಡಿದೆ. ಇದು ಮಹಿಳೆಯರ ಭದ್ರತೆಯನ್ನು ಖಾತ್ರಿಪಡಿಸುವ ಪಕ್ಷದ ಬದ್ಧತೆಗೆ ಪುರಾವೆಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.