newsics.com
ಉತ್ತರಾಖಂಡ: ನರ್ಸ್ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಪೊಲೀಸರು ಆರೋಪಿಯನ್ನು ಗುರುತಿಸಿ, ಬಂಧಿಸಿದ್ದಾರೆ.
ಗದರ್‌ಪುರದ ಇಸ್ಲಾಂನಗರದ ಮಹಿಳೆ ಉತ್ತರಾಖಂಡದ ನೈನಿತಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆಕೆ ತನ್ನ 11 ವರ್ಷದ ಮಗಳೊಂದಿಗೆ ಬಿಲಾಸ್‌ಪುರ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಆಕೆ ಹಲವು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 31ರಂದು ಆಕೆಯ ಸಹೋದರಿ ನಾಪತ್ತೆಯಾದ ತಂಗಿಯನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದರು.
ಇದಾದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಇದಾದ ಒಂದು ವಾರದ ನಂತರ ಉತ್ತರ ಪ್ರದೇಶದ ದಿಬ್ಡಿಬಾದಲ್ಲಿನ ಖಾಲಿ ಜಾಗದಲ್ಲಿ ಆಕೆಯ ಶವ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ಬಯಲಾಗಿದೆ.
ಶಂಕಿತ ಆರೋಪಿಯನ್ನು ಉತ್ತರ ಪ್ರದೇಶದ ಬರೇಲಿಯ ಕಾರ್ಮಿಕ ಧರ್ಮೇಂದ್ರ ಎಂದು ಗುರುತಿಸಲಾಗಿದ್ದು, ರಾಜಸ್ಥಾನದ ಜೋಧಪುರದಲ್ಲಿ ಆತನನ್ನು ಬಂಧಿಸಲಾಗಿದೆ.